ADVERTISEMENT

ತುತ್ತಿಗೆ ಹತ್ಮಂದ್ಯಾಗ್ಲಿ ಎಂದವರೂ ಲಿಂಗವಂತರೇ : ಹಿರಿಶಾಂತವೀರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:35 IST
Last Updated 15 ಸೆಪ್ಟೆಂಬರ್ 2025, 5:35 IST
ಕೊಪ್ಪಳದಲ್ಲಿ ಭಾನುವಾರ ನಡೆದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆಯ 3ನೇ ರಾಜ್ಯ ಸಮಾವೇಶವನ್ನು ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು 
ಕೊಪ್ಪಳದಲ್ಲಿ ಭಾನುವಾರ ನಡೆದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆಯ 3ನೇ ರಾಜ್ಯ ಸಮಾವೇಶವನ್ನು ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು     

ಕೊಪ್ಪಳ: ‘ಊಟಕ್ಕೆ ಕುಳಿತಾಗ, ʻಊಟ ಮಾಡೋಣ ಬನ್ನಿʼ ಎಂದು ಕರೆದರೆ ಅವರೆಲ್ಲ ಖಂಡಿತ ಲಿಂಗಾಯತರು. ಕರೆದೊಡನೇ ಹೋಗದೆ ಅದಕ್ಕೆ ಪ್ರತಿಯಾಗಿ ʻತುತ್ತಿಗೆ ಹತ್ಮಂದ್ಯಾಗ್ಲಿʼ ಎಂದರೆ ಅವರು ಕೂಡ ಲಿಂಗವಂತರೇ’ ಎಂದು ಹೂವಿನಹಡಗಲಿಯ ಗವಿಸಿದ್ಧೇಶ್ವರ ಶಾಖಾಮಠದ ಹಿರಿಶಾಂತವೀರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಮತ್ತು ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆಯ 3ನೇ ರಾಜ್ಯ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿ ‘ನಾಡಿನ‌ ಮಠಗಳು ಅಪಾರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ನೀಡುತ್ತಿವೆ ಎಂದರೆ ಅದು ಸಮಾಜದ ಜಾಗೃತಿಯಲ್ಲಿ ತೊಡಗಿರುವ ನಿಮ್ಮಂತವರಿಂದಲೇ ಸಾಧ್ಯವಾಗಿದೆ. ಅಂತಹ ಮಠಗಳಲ್ಲಿ ಗವಿಮಠವೂ ಒಂದಾಗಿದೆ’ ಎಂದು ಪ್ರಶಂಸಿಸಿದರು.

‘ಕಡಲಬಾಳದಲ್ಲಿ ಆಸ್ತಿ ‌ಮಾರಿ ಈ ಭಾಗದ ಮಕ್ಕಳಿಗಾಗಿ ಮೊಟ್ಟ ಮೊದಲ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದವರು ಗವಿಮಠದ ಮರಿಶಾಂತವೀರ ಶಿವಯೋಗಿಗಳು. ಮಕ್ಕಳ ಅನ್ನ, ಅಕ್ಷರ ದಾಸೋಹಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಗವಿಮಠ ಮಾಡುತ್ತಲೇ ಬಂದಿರುವುದು ಈ ನಾಡಿನ ಸುದೈವ. ಇಲ್ಲಿನ ಭಕ್ತರೂ ಕೂಡ ಅವರ ಸಂಕಲ್ಪಕ್ಕೆ ಜೊತೆಗೂಡಿರುವುದು ಗಮನಾರ್ಹ ವಿಷಯ. ನಾನೂ ಬೆಳೆಯಬೇಕು, ನನ್ನ ಸುತ್ತಲಿನ ಪರಿಸರವೂ ಬೆಳೆಯಬೇಕು ಎಂಬುದು ವೀರಶೈವ ಲಿಂಗಾಯತರ ಗುಣ. ಮಠ, ಮಂದಿರಗಳ ಕಾರ್ಯ ನಿರ್ವಹಣೆಗೆ ಲಿಂಗಾಯತ ಧರ್ಮದ ಈ ಗುಣವೇ ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು’ ಎಂದು ಮಾರ್ಮಿಕವಾಗಿ ನುಡಿದರು.

ADVERTISEMENT

‘ವೀರಶೈವ ಲಿಂಗಾಯತ ಧರ್ಮದ ನೀತಿ, ತತ್ವಗಳು ಇಲ್ಲಿ ನೆರೆದಿರುವ ಮುಖಗಳಲ್ಲಿ ಕಾಣುತ್ತಿವೆ. ಜಾತಿ, ಬೇಧ, ಭಾವ ಮಾಡದೆ ಎಲ್ಲರೂ ನನ್ನ‌ ಮಕ್ಕಳು ಎಂದು ಸಲುಹಿದ ಸಮಾಜ ನಮ್ಮದು. ಸಾಕಷ್ಟು ತಾಳ್ಮೆ, ಸಹಿಷ್ಣುತೆಯನ್ನು ಮೈಗೂಡಿಸಿಕೊಂಡಿರುವ ವೀರಶೈವರ ನಡೆ ನಾಡಿಗೆ ಮಾದರಿಯಾಗಿದೆ. ವಿದ್ಯುತ್‌ ನಿಗಮದ ನೌಕರರು ಸಾಕಷ್ಟು ಶ್ರಮಜೀವಿಗಳು. ತಮ್ಮ ಮನೆಯ ದೀಪದ ಬಗೆಗೆ ತಲೆಕೆಡಿಸಿಕೊಳ್ಳದ ಅವರು ಸದಾ ಪರರ ಮನೆ, ಮನ ಬೆಳಗುವ ಚಿಂತನೆಯಲ್ಲೇ ತೊಡಗಿಕೊಂಡಿರುತ್ತಾರೆ’ ಎಂದು ಹೇಳಿದರು.

ಹುಬ್ಬಳ್ಳಿಯ ಹೆಸ್ಕಾಂನ ಹಣಕಾಸು ನಿರ್ದೇಶಕ ಪ್ರಕಾಶ ಪಾಟೀಲ್‌ ಮಾತನಾಡಿ, ‘ವೀರಶೈವ ಸಮಾಜ ಪ್ರಪಂಚಕ್ಕೆ ಉನ್ನತ ಕೊಡುಗೆಗಳನ್ನು ನೀಡಿದೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವ ಇಂದಿಗೂ ಚಾಲನೆಯಲ್ಲಿದೆ. ಆ ತತ್ವ ಪರಿಪಾಲಿಸಿದವರನ್ನ ಎತ್ತರಕ್ಕೆ ಬೆಳೆಸುತ್ತದೆ ಎಂಬುದು ಹಲವಾರು ನಿದರ್ಶನಗಳ ಮೂಲಕ ಸಾಬೀತಾಗುತ್ತಲೇ ಇದೆ. ಸಮಾನತೆ ಮತ್ತು ಸೇವೆ ಎಂಬ ಮತ್ತೆರಡು ತತ್ವಗಳೂ ವೀರಶೈವ ಲಿಂಗಾಯತದ ಕೊಡುಗೆಗಳೇ ಆಗಿವೆ’ ಎಂದರು. 

ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳ ವೀರಶೈವ ಲಿಂಗಾಯತರ ವೇದಿಕೆಯ ರಾಜ್ಯಾಧ್ಯಕ್ಷ ಬಿ.ರು. ಪ್ರಕಾಶ, ಶಿವಮೊಗ್ಗದ ಜಿಲ್ಲಾಧ್ಯಕ್ಷ ಶಶಿಧರ, ಹೆಸ್ಕಾಂನ ತಾಂತ್ರಿಕ ನಿರ್ದೇಶಕ ಜಗದೀಶ್‌, ಬೆಸ್ಕಾಂನ ಹಣಕಾಸು ನಿರ್ದೇಶಕ ಮಹಾದೇವ, ಸಂಘಟನಾ ಕಾರ್ಯದರ್ಶಿ ಟಿ.ಎಂ. ಶಿವಪ್ರಕಾಶ, ಬಾಗಲಕೋಟೆ ಜಿಲ್ಲಾಧ್ಯಕ್ಷ ಕೆ.ಜಿ.ಹಿರೇಮಠ, ಮುನಿರಾಬಾದ್‌ನ ಅಧೀಕ್ಷಕ ಎಂಜಿನಿಯರ್‌ ಎಸ್‌.ಎಚ್‌.ಬಸವರಾಜ್‌, ಕೋಶಾಧ್ಯಕ್ಷ ಸಿ.ಪಿ.ಮಂಜುನಾಥ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರಯ್ಯಮಠ ವರದಿ ವಾಚಿಸಿದರು. ವೀರೇಶ್‌ ಪ್ರಾರ್ಥಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಗಿರೀಶ್‌ ಮೈಲಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.