ADVERTISEMENT

ಹನುಮಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 6:19 IST
Last Updated 9 ಡಿಸೆಂಬರ್ 2024, 6:19 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಸೋಮವಾರ ಐತಿಹಾಸಿಕ ಕ್ಷೇತ್ರ ಪಂಪಾಸರೋವರದಲ್ಲಿ ಹನುಮಮಾಲೆ ಧರಿಸಿದರು.

ಹನುಮ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮಾಲಾಧಾರಣೆ ಮಾಡಿದ ಅವರು ಪಂಪಾಸರೋವರದಲ್ಲಿಯೇ ಪೂಜಾ ವಿಧಾನಗಳನ್ನು ಪೂರ್ಣಗೊಳಿಸಿದರು. ಐದು ದಿನ ಹನುಮ ವೃತ ಆಚರಿಸಲಿರುವ ರೆಡ್ಡಿ ಡಿ. 13ರಂದು ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆ ಮಾಡುವರು. ಪ್ರತಿವರ್ಷವೂ ಹನುಮಮಾಲೆ ಧರಿಸುತ್ತಾರೆ. ಅವರ ಜೊತೆಗೆ ಬೆಂಬಲಿಗರು ಕೂಡ ಮಾಲೆ ಧಾರಣೆ ಮಾಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘2015ರಿಂದ ನಿರಂತರವಾರ ಮಾಲೆ ಧಾರಣೆ ಮಾಡುತ್ತಿದ್ದೇನೆ. ಇದರಿಂದ ಅಂದುಕೊಂಡ ಅನೇಕ ಕೆಲಸಗಳು ದೇವರ ಆಶೀರ್ವಾದದಿಂದ ಆಗಿವೆ. ಸುಮಾರು ₹240 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಎಲ್ಲ ಮಾಲಾಧಾರಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ರಾಜಕಾರಣದಲ್ಲಿ ಹಿಂದೆಯೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆದ್ದರಿಂದ ಗಂಗಾವತಿ ಕ್ಷೇತ್ರ ರಾಜಕೀಯವಾಗಿ ಪುನರ್ಜನ್ಮ ನೀಡಬೇಕು ಎಂದು ಶಾಸಕನಾಗುವ ಮೊದಲು ಅಂಜನಾದ್ರಿಯಲ್ಲಿ ಪ್ರಾರ್ಥಿಸಿದ್ದಕ್ಕೆ ಫಲ ಲಭಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.