ಕೊಪ್ಪಳ: ’ಹಿಂದೂ ಸಮಾಜದ ಗವಿಸಿದ್ದಪ್ಪ ನಾಯಕನ ಕೊಲೆ ಪ್ರಕರಣದ ಮೊದಲ ಆರೋಪಿ ಸಾಧಿಕ್ ಕೋಲ್ಕಾರ್‌ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ನಂಟು ಇದ್ದು, ಕೊಲೆಯ ಪ್ರಚೋದನೆ ನೀಡಿದ ಕಾಣದ ಕೈಗಳ ಹೆಸರುಗಳನ್ನೂ ಪೊಲೀಸರು ಬಹಿರಂಗಪಡಿಸಬೇಕು’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.
ಇಲ್ಲಿನ ಕುರುಬರ ಓಣಿಯಲ್ಲಿರುವ ಗವಿಸಿದ್ಧಪ್ಪ ನಾಯಕನ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ’ನಿಮ್ಮ ಮಗನ ಸಾವಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಡಿ ನ್ಯಾಯ ಒದಗಿಸಿಕೊಡುತ್ತೇವೆ. ಪ್ರಾಣ ಹೋದರೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಭರವಸೆ ನೀಡಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಸಾಧಿಕ್ ಕೈಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಾನೆ, ಗಾಂಜಾ ಸೇದುತ್ತಿರುವ ವಿಡಿಯೊಗಳು ವೈರಲ್ ಆಗಿವೆ. ದೈಹಿಕವಾಗಿ ಬಲಿಷ್ಠವಾಗಿದ್ದ ಗವಿಸಿದ್ಧಪ್ಪ ಅವರನ್ನು ಕನಿಷ್ಠ 10ರಿಂದ 15 ಜನ ಸೇರಿ ಕೊಲೆ ಮಾಡಿದ್ದಾರೆ. ಅವರನ್ನು ವೀರಾವೇಶದಿಂದ ಕೊಂದು ಹಾಕಲು ಪ್ರಚೋದನೆ ನೀಡಿದವರು ಯಾರು? ಗವಿಸಿದ್ದಪ್ಪ ಮನೆಯಿಂದ ಹೊರಗೆ ಬರುವಲ್ಲಿ ಮುಸ್ಲಿಂ ಯುವತಿಯ ಪಾತ್ರವೇನು ಎನ್ನುವುದು ಕೂಡ ಬಹಿರಂಗವಾಗಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಅಂತಿಮ ಸಂಸ್ಕಾರವನ್ನು ತರಾತುರಿಯಲ್ಲಿ ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ ರಾಮುಲು ‘ಕೃತ್ಯದ ಹಿಂದೆ ಪೊಲೀಸರ, ರಾಜಕಾರಣಿಗಳ ಅಥವಾ ಪಿಎಫ್‌ಐ ಸಂಘಟನೆಗಳ ಕುಮ್ಮಕ್ಕು ಇದೆಯಾ ಎನ್ನುವುದು ಗೊತ್ತಾಗಬೇಕು. ಕುಮ್ಮಕ್ಕು ಕೊಟ್ಟವರ ಮೇಲೂ ಕ್ರಮವಾಗಬೇಕು. ನಾವು ಏನೇ ಮಾಡಿದರೂ ಏನೂ ಆಗುವುದಿಲ್ಲ ಎನ್ನುವ ಸಂದೇಶವನ್ನು ಮುಸ್ಲಿಂ ಯುವಕ ನೀಡಿದ್ದಾರೆ. ದನಕರುಗಳನ್ನು ಕಡೆದ ರೀತಿಯಲ್ಲಿ ಮನುಷ್ಯನನ್ನು ಕರೆಯಲಾಗಿದೆ. ಸಾಧಿಕ್‌ಗೆ ಅಷ್ಟೊಂದು ಧೈರ್ಯ ಹೇಗೆ ಬಂತು’ ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮುಖಂಡರಾದ ನವೀನ್ ಗುಳಗಣ್ಣನವರ, ಗಣೇಶ ಹೊರತಟ್ನಾಳ, ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ದೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಮುಖಂಡರಾದ ಜೋಗದ ನಾರಾಯಣಪ್ಪ, ರಾಮಣ್ಣ ಕಲ್ಲಣ್ಣನವರ, ಯಮನೂರಪ್ಪ ನಾಯಕ, ಬಿಲ್ಗಾರ ನಾಗರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮುಸ್ಲಿಂ ಯುವತಿಯ ಪಾತ್ರ ಬಹಿರಂಗಕ್ಕೆ ಒತ್ತಾಯ |ಆರೋಪಿಗಳನ್ನು ಕರೆತಂದು ಪೊಲೀಸರಿಂದ ಸ್ಥಳ ಮಹಜರು | ಗವಿಸಿದ್ಧಪ್ಪನ ಮನೆಗೆ ಪಾದಯಾತ್ರೆ ಮೂಲಕ ಬಂದ ಶ್ರೀರಾಮುಲು
8ರಂದು ಬೃಹತ್ ಹೋರಾಟ ನಡೆಸಲು ನಿರ್ಧಾರ
ಕೊಪ್ಪಳ: ನಾಯಕ ಸಮುದಾಯದ ಗವಿಸಿದ್ಧಪ್ಪ ಕೊಲೆ ಖಂಡಿಸಿ ಹೋರಾಟ ರೂಪಿಸುವ ಕುರಿತು ಚರ್ಚಿಸಲು ಮಂಗಳವಾರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಭೆ ನಡೆದಿದ್ದು ಆ. 8ರಂದು ನಗರದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ‘ಹಿಂದೂ ಸಂಘಟನೆಗಳ ಎಲ್ಲ ಮುಖಂಡರನ್ನೂ ಪ್ರತಿಭಟನೆಗೆ ಆಹ್ವಾನಿಸಬೇಕು. ದೊಡ್ಡಮಟ್ಟದಲ್ಲಿ ಹೋರಾಟ ಸಂಘಟಿಸಬೇಕು. ನಾನೂ ಇದರಲ್ಲಿ ಭಾಗಿಯಾಗುವೆ’ ಎಂದು ಶ್ರೀರಾಮುಲು ಸಮುದಾಯದ ಜನರಿಗೆ ತಿಳಿಸಿದರು. ಬಳಿಕ ಹಳೇ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ವಾಲ್ಮೀಕಿ ಭವನದಿಂದ ಗವಿಸಿದ್ಧಪ್ಪ ಮನೆ ತನಕ ಪಾದಯಾತ್ರೆ ಮೂಲಕ ಸಮಾಜದ ಮುಖಂಡರ ಜೊತೆ ರಾಮುಲು ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.