ADVERTISEMENT

ಗಂಗಾವತಿ: ವೆಂಕಟೇಶನಿಗೆ ಲಾಭ ತಂದ ‘ವರಾಹ’

ಟಗರು, ಕೋಳಿ ಜತೆ ಹಂದಿ ಸಾಕಾಣಿಕೆ ಮಾಡಿ ಉತ್ತಮ ಆದಾಯ

ಎನ್.ವಿಜಯ್
Published 21 ಜನವರಿ 2026, 5:18 IST
Last Updated 21 ಜನವರಿ 2026, 5:18 IST
ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಮತ್ತು ದಾಸನಾಳ ಗ್ರಾಮದ ಮಧ್ಯದ ಜಮೀನಿನಲ್ಲಿ ವೆಂಕಟೇಶ ಅವರು ಸಾಕಣೆ ಮಾಡಿದ ಹಂದಿಗಳು 
ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಮತ್ತು ದಾಸನಾಳ ಗ್ರಾಮದ ಮಧ್ಯದ ಜಮೀನಿನಲ್ಲಿ ವೆಂಕಟೇಶ ಅವರು ಸಾಕಣೆ ಮಾಡಿದ ಹಂದಿಗಳು    

ಗಂಗಾವತಿ: ಓದಿದ್ದು ಏಳನೇ ತರಗತಿ, ಮನೆಯಲ್ಲಿ ಬಡತನ, ಕುಟುಂಬ ನಿರ್ವಹಣೆಗಾಗಿ ಹೊಟೇಲ್ ಕೆಲಸಕ್ಕೆ ಸೇರಿದ ವ್ಯಕ್ತಿಯೊಬ್ಬರು ಹಂದಿ ಸಾಕಾಣಿಕೆ ಮಾಡಿ ಯಶಸ್ಸು ಕಂಡು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ.

ಗಂಗಾವತಿ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿಯ 25ನೇ ವಾರ್ಡ್‌ ನಿವಾಸಿ ವೆಂಕಟೇಶ ಕನಕಗಿರಿ ಗುತ್ತಿಗೆ ಜಮೀನಿನಲ್ಲಿ ಹಂದಿ ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ. 

ವೆಂಕಟೇಶ ಅವರು ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ- ದಾಸನಾಳ ಗ್ರಾಮದ ನಡುವೆ 1 ಎಕರೆ ಜಮೀನನ್ನು 5 ವರ್ಷಕ್ಕೆ ಗುತ್ತಿಗೆ ಪಡೆದು ಸುಸಜ್ಜಿತ ಶೆಡ್ ನಿರ್ಮಿಸಿ ಕಳೆದ 3 ವರ್ಷಗಳಿಂದ ವಿದೇಶಿ ತಳಿಯ ಹಂದಿಗಳ ಸಾಕಣೆ ಮಾಡುತ್ತಿದ್ದಾರೆ. ತಳಿ ಸಂವರ್ಧನೆಯನ್ನೂ ಮಾಡಿ ಇತರೆ ಸಾಕಣೆದಾರರಿಗೂ ನೆರವಾಗಿದ್ದಾರೆ.

ADVERTISEMENT

ಕುಟುಂಬದ ಕುಲಕಸುಬು ಹಂದಿ ಸಾಕಾಣಿಕೆ ಆಗಿರುವುದರಿಂದ ಸಾಕಾಣಿಕೆ ಮೇಲೆ ಇವರಿಗೆ ಹಿಡಿತವಿತ್ತು. ಹಾಗಾಗಿ ಆರಂಭಿಕ ಹಂತದಲ್ಲಿ ₹15 ಲಕ್ಷದ ಸಾಕಾಣಿಕೆ ಶೆಡ್ ನಿರ್ಮಿಸಿ, ₹5 ಲಕ್ಷದಲ್ಲಿ 60 ಹಂದಿ, ₹43 ಸಾವಿರ 5 ಹೆಣ್ಣು ಹಂದಿ ಸಾಕಿದ್ದಾರೆ. 2 ತಿಂಗಳ ನಂತರ ಮತ್ತೆ 150 ಹಂದಿ ಮರಿ ತಂದು ಸಾಕಿದ್ದು ಈಗ ಎರೆಡೂವರೆ ವರ್ಷದಲ್ಲಿ ಹಂದಿಗಳು ಬೆಳವಣಿಗೆ ಕಂಡು 500 ಹಂದಿ, 75 ತಾಯಿ ಹಂದಿಗಳಾಗಿವೆ.

ಕುಟುಂಬಸ್ಥರಿದ್ದರೆ ನಿರ್ವಹಣೆ ಸುಲಭ: ‘ಹಂದಿ ಸಾಕಾಣಿಕೆಯಲ್ಲಿ ಕುಟುಂಬಸ್ಥರ ಸಹಕಾರದಿಂದ ಮಾತ್ರ ಆದಾಯ ಗಳಿಸಲು ಸಾಧ್ಯ. ಸಮಯಕ್ಕೆ ಸರಿಯಾಗಿ ಆಹಾರ, ಸ್ವಚ್ಚತೆ, ಔಷಧಿ ಹಾಕುವುದು, ಆರೋಗ್ಯ ತಪಾಸಣೆ ಮಾಡುತ್ತಲೇ ಇರಬೇಕು. ತಪ್ಪಿದರೆ ರೋಗಗಳಿಗೆ ತುತ್ತಾಗಿ ಎಲ್ಲವು ಸಾಯುತ್ತವೆ. ಹೊರಗಿನವರನ್ನು ಹಂದಿಗಳ ಶೆಡ್‌ಗೆ ಬರದಂತೆ ನೋಡಿಕೊಳ್ಳಬೇಕು. ಈ ಕೆಲಸ ಮನೆಯವರಿಂದ ಮಾತ್ರ ಸಾಧ್ಯ’ ಎನ್ನುತ್ತಾರೆ ವೆಂಕಟೇಶ ಅವರ ಪತ್ನಿ ದುರ್ಗಮ್ಮ ಹೇಳುತ್ತಾರೆ.

ಪಶು ಸಂಗೋಪನಾ ಇಲಾಖೆಯಿಂದ ನೆರವು ಇಲ್ಲ: ಹಂದಿ ಸಾಕಾಣಿಕೆ‌ ಮಾಡಿ 3 ವರ್ಷಗಳಾಗುತ್ತಿವೆ. ಪಶು ಸಂಗೋಪನಾ ಇಲಾಖೆಯಿಂದ ಯಾವ ನೆರವು, ಸೌಲಭ್ಯ ಸಿಕ್ಕಿಲ್ಲ‌. ಹಂದಿಗಳಿಗೆ ಹಾಕಲು ಔಷಧಿ ನೀಡುವಂತೆ ಇಲಾಖೆ ಅಧಿಕಾರಿಗಳನ್ನ ಕೇಳಿದರೆ, ಹೈನುಗಾರಿಕೆಗೆ ಮಾತ್ರ ನಮ್ಮಲ್ಲಿ ಔಷಧಿಗಳಿವೆ. ಸರ್ಕಾರ ಇನ್ನೂ ಔಷಧಿ ಕಳುಸಿಲ್ಲ ಎನ್ನುತ್ತಾರೆ. ಹಾಗಾಗಿ ಖಾಸಗಿಯಲ್ಲೇ  ಔಷಧಿ ತಂದು ಹಂದಿಗಳಿಗೆ ಹಾಕುತ್ತೇವೆ. ಪಶು ವೈದ್ಯರು ತಪಾಸಣೆಗೆ ನಮ್ಮ ಶೆಡ್‌ಗೆ ಬರುವುದೇ ಇಲ್ಲ ಎಂದು ವೆಂಕಟೇಶ ಬೇಸರ ವ್ಯಕ್ತಪಡಿಸುತ್ತಾರೆ.

ವೆಂಕಟೇಶ ಅವರು ಸಾಕಣೆ ಮಾಡಿದ ಹಂದಿಗಳನ್ನು ಪರಿಶೀಲಿಸಿದ ಅಧಿಕಾರಿಗಳು 
ವೆಂಕಟೇಶ ಅವರು ಸಾಕಣೆ ಮಾಡಿದ ತಾಯಿ ಹಂದಿ ಮತ್ತು ಮರಿ ಹಂದಿಗಳು

ವಿದೇಶಿ ತಳಿಗಳು

ವೆಂಕಟೇಶ ಅವರ ಶೆಡ್‌ನಲ್ಲಿ ಡ್ಯುರಾಕ್ ಯಾರ್ಕ್ ಶೇರ್ ಲ್ಯಾಂಡ್ರೆಸ್ ತಿಳಿಯ ಹಂದಿಗಳಿದ್ದು ಇವುಗಳಿಂದಲೇ ಕ್ರಾಸಿಂಗ್ ಮಾಡಿ ಎರಡು ತಿಂಗಳ ನಂತರ ಹಂದಿ ಮರಿಗಳನ್ನು ತಾಯಿಯಿಂದ ದೂರವಿರಿಸುತ್ತಾರೆ. 6 ತಿಂಗಳ ಕಾಲ ಆಹಾರ ನೀಡಿ ಪೋಷಣೆ ಮಾಡಿದರೆ 1 ಕ್ವಿಂಟಲ್ ಕಟಿಂಗ್ ಹಂದಿಗಳಿಗೆ ₹12ರಿಂದ ₹13 ಸಾವಿರ ತಾಯಿಹಂದಿ ಒಂದಕ್ಕೆ ₹18 ಸಾವಿರ ದೊರೆಯುತ್ತದೆ. ಖರ್ಚು ಆದಾಯದ ಲೆಕ್ಕ: ಹಂದಿ ಸಾಕಾಣಿಕೆಗೆ ಜಮೀನು ಗುತ್ತಿಗೆ ಶೆಡ್ ನಿರ್ಮಾಣ ಆಹಾರ ಔಷಧಿ ನಿರ್ವಹಣೆ ಕೂಲಿ ಸೇರಿ ಎರಡೂವರೆ ವರ್ಷಕ್ಕೆ ₹50 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. 2025ರಲ್ಲಿ 30 ಟನ್‌ಗೂ ಅಧಿಕ ಕಟಿಂಗ್ ಹಂದಿ 100 ತಾಯಿಹಂದಿ 25 ಕೆಜಿ ಹಂದಿ‌ ಮರಿ ಮಾರಾಟ ಮಾಡಿದ್ದು ₹60 ಲಕ್ಷ ಬಂದಿದೆ. ಈವರೆಗೆ ಎಲ್ಲ ಖರ್ಚು ವೆಚ್ಚ ತೆಗೆದು ₹18ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ.

ನಷ್ಟದ ಪ್ರಮಾಣ‌ ಕಡಿಮೆ

ಇದ್ದಲ್ಲೇ ಬಂದು ಖರೀದಿ ಹಂದಿಗಳಿಗೆ ಕಾಲಕಾಲಕ್ಕೆ ಔಷಧಿ ಲಸಿಕೆ ನೀಡುವುದರಿಂದ ಆರೋಗ್ಯವಾಗಿರುತ್ತವೆ‌ ಹಾಗಾಗಿ ನಷ್ಟದ ಪ್ರಮಾಣ ಕಡಿಮೆ. ಹುಬ್ಬಳ್ಳಿ ಬೆಂಗಳೂರು ಬೆಳಗಾವಿ ಗೋಕಾಕ ಗೋವಾ ದಾವಣಗೆರೆ ಆಂಧ್ರಪ್ರದೇಶದ ಗಡಿ ವಿಜಯಪುರ ಮೂಲದ ದಲ್ಲಾಳಿಗಳು ನೇರವಾಗಿ ವೆಂಕೇಶ ಅವರ ಶೆಡ್‌ಗೆ ಬಂದು ಹಂದಿಗಳನ್ನು ಖರೀದಿಸುತ್ತಾರೆ. ಈ ಉದ್ಯಮಕ್ಕೆ ಮಾರುಕಟ್ಟೆ ಸ್ಥಳಕ್ಕೆ ಬರುತ್ತಿದೆ.

ಟಗರು ಕೋಳಿ ಜತೆ ಹಂದಿ ಸಾಕಾಣಿಕೆ ಮಾಡಿದ್ದು ಉತ್ತಮ ಆದಾಯ ಬಂದಿದೆ. ಇನ್ನೂ 1/2 ಎಕರೆ ಭೂಮಿ ಗುತ್ತಿಗೆ ಪಡೆದು ಎರಡನೇ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ತಿಂಗಳಿಗೆ ಎಲ್ಲ ಖರ್ಚು ತೆಗೆದು ₹1ಲಕ್ಷ ಆದಾಯ ಬರುತ್ತಿದೆ. ವಾಹನದಲ್ಲಿ ಫಾಸ್ಟ್ ಫುಡ್ ವ್ಯಾಪಾರವನ್ನೂ ಮಾಡುತ್ತಿದ್ದೇನೆ
ವೆಂಕಟೇಶ ಕನಕಗಿರಿ ಹಂದಿ ಸಾಕಣೆದಾರ 
ಹಂದಿ ಸಾಕಾಣಿಕೆಯಿಂದ ವೆಂಕಟೇಶ ಅವರು ಉತ್ತಮ ಆದಾಯಗಳಿಸುತ್ತಾ ಸ್ವಾವಂಬಿಯಾಗಿ ಜೀವನ ನಡೆಸುತ್ತಿದ್ದಾರೆ.‌ ಹಂದಿ ಸಾಕಾಣಿಕೆ ಶೆಡ್‌ಗೆ ನಾವು ಭೇಟಿ ನೀಡಿದ್ದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ. ಆಸಕ್ತರು ಹಂದಿ ಸಾಕಾಣಿಕೆ ಮಾಡಿ ಲಾಭಗಳಿಸಬಹುದು 
ಡಾ.ರಾಘವೇಂದ್ರ ಎಲಿಗಾರ ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.