ADVERTISEMENT

ಕೊಪ್ಪಳ | ಕುಸಿದ ಧಾರಣೆ, ಇಳುವರಿ; ರೈತರಿಗೆ ಮೆಣಸಿನಕಾಯಿ ಘಾಟು

ಭರ್ಜರಿ ಲಾಭ ಪಡೆದಿದ್ದ ರೈತರಿಗೆ ಈ ಬಾರಿ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 5:48 IST
Last Updated 28 ಫೆಬ್ರುವರಿ 2025, 5:48 IST
.
.   

ಕೊಪ್ಪಳ: ಜಿಲ್ಲೆಯ ಅಲ್ಲಲ್ಲಿ ಒಣಬೇಸಾಯ ಕೃಷಿಯಲ್ಲಿ ಒಣ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಇಳುವರಿ ಕಡಿಮೆಯಾಗಿದ್ದು, ಬೆಲೆಯೂ ಕಳೆದ ವರ್ಷಕ್ಕಿಂತ ಸಾಕಷ್ಟು ಇಳಿಕೆಯಾಗಿದೆ. ಇದು ರೈತರನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.

ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳ ತಾಲ್ಲೂಕುಗಳ ವ್ಯಾಪ್ತಿಯ ಕೆಲ ಭಾಗದಲ್ಲಿ ಒಟ್ಟು 500 ಹೆಕ್ಟೇರ್‌ ಪ್ರದೇಶದಲ್ಲಿ ಒಣ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಒಂದು ಸಾವಿರ ರೈತರು ಈ ಬೆಳೆ ಬೆಳೆಯುತ್ತಿದ್ದಾರೆ. ವಾರ್ಷಿಕ 4,000 ಟನ್‌ ಉತ್ಪಾದನೆ ಆಗುತ್ತಿದೆ. ಈ ವರ್ಷ ಅವಧಿಪೂರ್ವದಲ್ಲಿಯೇ ರೋಗಬಾಧೆ ಕಾಣಿಸಿಕೊಂಡಿದೆ. ಹಿಂದಿನ ಮೂರು ವರ್ಷಗಳಿಂದ ಬೆಲೆ ಕುಸಿಯುತ್ತಲೇ ಬಂದಿರುವ ಕಾರಣ ಬೇರೆ ಬೆಳೆಗಳ ನಡುವೆ ಅಲ್ಲಲ್ಲಿ ಮಾತ್ರ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ಮಿಶ್ರ ಬೆಳೆಯ ನಡುವೆಯೂ ಮೊದಲು ಪ್ರತಿ ಎಕರೆಗೆ ಕನಿಷ್ಠ ಮೂರು ಕ್ವಿಂಟಲ್‌ನಷ್ಟು ಫಸಲು ಪಡೆಯುತ್ತಿದ್ದ ರೈತರಿಗೆ ಈ ವರ್ಷ ಒಂದೂವರೆಯಿಂದ ಎರಡು ಕ್ವಿಂಟಲ್‌ ಮಾತ್ರ ಫಸಲು ಬಂದಿದೆ. ಎಲೆ ಮುಟುರು ರೋಗ ವ್ಯಾಪಕವಾಗಿ ಬಾಧಿಸುತ್ತಿದೆ. ಈ ರೋಗದ ಲಕ್ಷಣಗಳು ಆರಂಭದಲ್ಲಿ ಗೊತ್ತಾಗುವುದಿಲ್ಲ. ಮೂರ್ನಾಲ್ಕು ವಾರಗಳ ಬಳಿಕ ರೈತರಿಗೆ ಗೊತ್ತಾಗುತ್ತದೆ. ಅಷ್ಟರೊಳಗೆ ಬೆಳೆ ಹಾಳಾಗಿರುತ್ತದೆ. ಮುಟುರು ರೋಗದಿಂದ ಎಲೆ ಹಳದಿ ಹಾಗೂ ಕಪ್ಪಾಗುವುದು ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ADVERTISEMENT

ಕುಷ್ಟಗಿ ತಾಲ್ಲೂಕಿನ ಮೇಗೂರು ಗ್ರಾಮದ ಈಶ್ವರಗೌಡ ಹುಡೇದ ಎಂಬ ರೈತ ತಮ್ಮ ಎರಡು ಎಕರೆ ಭೂಮಿಯಲ್ಲಿ ಉಳ್ಳಾಗಡ್ಡಿ ಜೊತೆ ಒಣಮೆಣಸಿನಕಾಯಿ ಮಿಶ್ರ ಬೆಳೆಯಾಗಿ ಬೆಳೆದಿದ್ದರು. ಕಳೆದ ವರ್ಷ ಕೂಡ ಬೆಳೆದು ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್‌ನಷ್ಟು ಇಳುವರಿ ಪಡೆದಿದ್ದರು. ಈ ವರ್ಷ ಫಸಲು ಶೇ 50ರಷ್ಟು ಕುಸಿತವಾಗಿದೆ. ಜಿಲ್ಲೆಯ ಮೆಣಸಿನಕಾಯಿ ಬೆಳೆಯುವ ರೈತರಿಗೆ ಹುಬ್ಬಳ್ಳಿ ಹಾಗೂ ಬ್ಯಾಡಗಿಯೇ ಪ್ರಮುಖ ಮಾರುಕಟ್ಟೆ. ಈ ಬೆಳೆ ಬೆಳೆದು ಹಿಂದೆ ಸಾಕಷ್ಟು ಲಾಭ ಪಡೆದಿದ್ದ ರೈತರು ಈ ವರ್ಷ ಕೈ ಸುಟ್ಟುಕೊಳ್ಳುವಂತಾಗಿದೆ. ಜಿಲ್ಲೆಯ ಬಹುತೇಕ ರೈತರದ್ದು ಇದೇ ಪರಿಸ್ಥಿತಿ.

‘ಮುಂಗಾರು ಸಮಯದಲ್ಲಿ ಮಳೆ ಜಾಸ್ತಿಯಾಗಿದ್ದರಿಂದ ರೋಗದ ಸಮಸ್ಯೆ ಕಾಡಿ ಇಳುವರಿ ಕಡಿಮೆಯಾಯಿತು. ಬ್ಯಾಡಗಿ ಹಾಗೂ ಕಡ್ಡಿ ತಳಿಯನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತೇವೆ. ಎರಡ್ಮೂರು ವರ್ಷಗಳ ಹಿಂದೆ ಪ‍್ರತಿ ಕ್ವಿಂಟಲ್‌ ₹40 ಸಾವಿರಕ್ಕೆ ಮಾರಾಟ ಮಾಡಿದ ಮೆಣಸಿನಕಾಯಿ ಈಗ ಕೇವಲ ₹18 ಸಾವಿರ ಬೆಲೆಯಿದೆ. ಮೊದಲಿನ ಗುಣಮಟ್ಟವಿದ್ದರೂ ಖರೀದಿದಾರರು ಮುಂದೆ ಬರುತ್ತಿಲ್ಲ’ ಎಂದು ಈಶ್ವರಗೌಡ ಹುಡೇದ ಬೇಸರ ವ್ಯಕ್ತಪಡಿಸಿದರು.

ಒಣ ಮೆಣಸಿನಕಾಯಿ ಫಸಲು ಬಂದ ಪ್ರತಿಬಾರಿಯೂ ಪ್ರತಿ ಕ್ವಿಂಟಲ್‌ಗೆ ₹50 ಸಾವಿರದ ತನಕ ಮಾರಾಟ ಮಾಡಿದ್ದೇನೆ. ಈಗ ರೋಗದ ಸಮಸ್ಯೆಯಿಂದೆ ₹22 ಸಾವಿರಕ್ಕೆ ಬೆಲೆ ಇಳಿದಿದೆ.
ಶರಣಗೌಡ ಪೊಲೀಸ್‌ ಪಾಟೀಲ ಮೇಗೂರು ರೈತ ಕುಷ್ಟಗಿ ತಾಲ್ಲೂಕು
ಒಣ ಮೆಣಸಿನಕಾಯಿ ಬೆಲೆ ಹಾಗೂ ಇಳುವರಿ ವ್ಯಾಪಕವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆಳೆಯುವವರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.
ಕೃಷ್ಣ ಸಿ. ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.