ADVERTISEMENT

ದಲಿತರು ಕ್ಷೌರ ಕೇಳಿದ್ದಕ್ಕೆ ಅಂಗಡಿಯೇ ಬಂದ್‌: ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2025, 16:05 IST
Last Updated 6 ಮೇ 2025, 16:05 IST
ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಿರುವುದು
ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಿರುವುದು   

ಕೊಪ್ಪಳ: ಜಿಲ್ಲಾ ಕೇಂದ್ರದಿಂದ ಏಳು ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದಲಿತರು ಕ್ಷೌರ ಮಾಡುವಂತೆ ಕೇಳಿದ್ದರಿಂದ ಕ್ಷೌರದ ಅಂಗಡಿಗಳನ್ನೇ ಬಂದ್ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

‘ಎಲ್ಲರಂತೆ ನಮಗೂ ಕ್ಷೌರ ಮಾಡಬೇಕು’ ಎಂದು ಗ್ರಾಮದ ದಲಿತ ಯುವಕರು ಕೇಳಿದ್ದು, ಅದಕ್ಕೆ ಮೊದಲು ಕ್ಷೌರಿಕರು ನಿರಾಕರಿಸಿದ್ದರು. ಎರಡು ತಿಂಗಳ ಹಿಂದೆ ಇದು ಜಟಾಪಟಿಗೂ ಕಾರಣವಾಗಿತ್ತು. ಆಗ ಮಧ್ಯಪ್ರವೇಶಿಸಿದ್ದ ಪೊಲೀಸರು ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿ ಎಲ್ಲರಿಗೂ ಕಡ್ಡಾಯವಾಗಿ ಕ್ಷೌರ ಮಾಡಬೇಕು ಎಂದು ಸೂಚಿಸಿದ್ದಾಗ ಒಪ್ಪಿಕೊಂಡಿದ್ದರು. ಈಗ ಮತ್ತೆ ದಲಿತರನ್ನು ಹೊರತುಪಡಿಸಿ ಉಳಿದವರ ಮನೆ ಮನೆಗೆ ಮಾತ್ರ ಹೋಗಿ ಕ್ಷೌರ ಮಾಡುತ್ತಿದ್ದಾರೆ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಮುದ್ದಾಬಳ್ಳಿ ಗ್ರಾಮದಲ್ಲಿ ಎರಡು ಕ್ಷೌರದ ಅಂಗಡಿಗಳು ಹಾಗೂ ಮೂರ್ನಾಲ್ಕು ಹೋಟೆಲ್‌ಗಳು ಇವೆ. ಹೋಟೆಲ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ ಬಳಿಕ ಅಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ಈಗ ಗ್ರಾಮದ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಅಲ್ಲಿನ ದಲಿತರು ಕೊಪ್ಪಳಕ್ಕೆ ಬಂದು ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ.

ADVERTISEMENT

ಈ ಘಟನೆ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಪರ ಎಂದು ಹೇಳಿಕೊಳ್ಳುತ್ತಾರೆ. ಅವರ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ ಕ್ಷೇತ್ರದಲ್ಲಿಯೇ ಅಸ್ಪೃಶ್ಯತೆ ಜೀವಂತ ಇದೆ. ತಾರತಮ್ಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.