ADVERTISEMENT

ಗಂಗಾವತಿ | 'ಟಿಎಪಿಸಿಎಂಎಸ್ ಚುನಾವಣೆ ಮೂರನೇ ಬಾರಿ ರದ್ದು'

ಮೊದಲ ಅವಧಿಯ ಅಧಿಕಾರದ ಗದ್ದುಗೆ ಏರಲು ಇಬ್ಬರ ನಡುವೆ ಜಿದ್ದಾಜಿದ್ದಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:54 IST
Last Updated 16 ಡಿಸೆಂಬರ್ 2025, 6:54 IST
ಗಂಗಾವತಿ ಪ್ರತಿಷ್ಟಿತ ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ (ಟಿಎಪಿಸಿಎಂಎಸ್) ಸೋಮವಾರ ಹಮ್ಮಿಕೊಂಡ ಆಡಳಿತ ಮಂಡಳಿ ಚುನಾವಣೆಯಲ್ಲಿ ಸದಸ್ಯರು ಭಾಗವಹಿಸಿರುವುದು
ಗಂಗಾವತಿ ಪ್ರತಿಷ್ಟಿತ ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ (ಟಿಎಪಿಸಿಎಂಎಸ್) ಸೋಮವಾರ ಹಮ್ಮಿಕೊಂಡ ಆಡಳಿತ ಮಂಡಳಿ ಚುನಾವಣೆಯಲ್ಲಿ ಸದಸ್ಯರು ಭಾಗವಹಿಸಿರುವುದು   

ಗಂಗಾವತಿ: ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆ ಕೋರಂ ಕೊರತೆಯಿಂದ ಮೂರನೇ ಬಾರಿ ರದ್ದಾಯಿತು.

ನಗರದ ಟಿಎಪಿಎಂಸಿ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರ ಚುನಾವಣೆ ಘೋಷಣೆಯಾಗಿತ್ತು, ಆಯ್ಕೆ ಮುನ್ನ ಸಭೆ ಆಯೋಜಿಸುವುದು ಕಾಯ್ದೆ. ಸಂಘದಲ್ಲಿ 15 ಸದಸ್ಯರ ಬಲದಲ್ಲಿ ಗುಂಜಳ್ಳಿ ರಾಜಶೇಖರಪ್ಪ ಮೃತಪಟ್ಟಿದ್ದರೆ, ಪಿಎಸ್‌ಎಸ್‌ಎನ್‌ ಪ್ರತಿನಿಧಿ ಸುಭಾಷ ತಿಪ್ಪಶೆಟ್ಟಿ ಮತ್ತು ಬಸನಗೌಡ ಅವರು ಪಿಎಸ್‌ಎಸ್‌ಎನ್‌ನಿಂದ ಸ್ಪರ್ಧಿಸಿ ಗೆದ್ದಿಲ್ಲ ಎನ್ನುವ ಕಾರಣಕ್ಕೆ ನಿರ್ದೇಶಕ ಸ್ಥಾನ ರದ್ದಾಗಿದೆ.

ಉಳಿದ 12 ನಿರ್ದೇಶಕರ ಬಲದಲ್ಲಿ ಕನಿಷ್ಠ ಏಳು ಸದಸ್ಯರಾದರೂ ಪಾಲ್ಗೊಳ್ಳಬೇಕಿತ್ತು. ಆದರೆ ನಿರ್ದೇಶಕ ಚನ್ನಪ್ಪ ಮಳಗಿ ಬೆಂಬಲಿತ 6 ಸದಸ್ಯರಷ್ಟೇ ಭಾಗವಹಿಸಿದ್ದರಿಂದ ಕೋರಂ ಕೊರತೆ ಕಾಡಿತು. ಅನಾರೋಗ್ಯದ ಕಾರಣ ಹೇಳಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋಗದ ನಾರಾಯಣಪ್ಪ ನಾಯಕ, ನಿರ್ದೇಶಕ ನಾಗರಾಜ್  ಚೂಡಾಮಣಿ, ಗಿರೀಶ ನಾಯಕ, ಪ್ರಸಾದ ಮತ್ತು ಅಮರೇಶಪ್ಪ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದರು. 

ADVERTISEMENT

ಪ್ರತಿಷ್ಠೆಗೆ ಚುನಾವಣೆ ರದ್ದು: ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿಷ್ಠೆ ಹೆಚ್ಚಾಗಿದ್ದು, ಇಬ್ಬರು ಬಿಜೆಪಿ ಬೆಂಬಲಿತರ ನಡುವೆ ಜಿದ್ದಾಜಿದ್ದಿ ಹೆಚ್ಚಾಗಿದೆ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆ ಮಾಡಿದ್ದರೂ ಮೊದಲ ಅವಧಿಯಲ್ಲಿಯೇ ಅಧಿಕಾರದ ಜಿದ್ದಾಜಿದ್ದಿಗೆ ಚನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ ನಡುವೆ ಪೈಪೋಟಿ ನಡೆದಿದೆ.   

ಮೂರನೇ ಬಾರಿ ರದ್ದಾಗಿದ್ದರಿಂದ ಆಡಳಿತ ಮಂಡಳಿ ಸೂಪರ್ ಸೀಡ್ ಅಗುವ ಸಾಧ್ಯತೆಗಳಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯ ಒಂದು ತಂಡ ಕಾಂಗ್ರೆಸ್ ಸಖ್ಯ ಬೆಳೆಸಲು ತಯಾರಿ ನಡೆಸಿಕೊಂಡಿತ್ತು.

ಸಿಇಒ ಅನಿಲ್ ಬಬಲಾದಿ, ಕಾರ್ಯದರ್ಶಿ ಸುಂಕಪ್ಪ ಇದ್ದರು.

ಕೋರಂ ಕೊರತೆಯಿಂದ ಚುನಾವಣೆ ಸಭೆ ರದ್ದಾಗಿದ್ದು ಸಭೆಯ ನಿರ್ಣಯ ಮೇಲಧಿಕಾರಿಗಳಿಗೆ ತಿಳಿಸಲಾಗುವುದು. ಅವರ ಸಲಹೆ ಮೇರೆಗೆ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನಿಸಲಾಗುವುದು.

-ಶಿವಾಜಿ ಚುನಾವಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.