
ತಾವರಗೇರಾ: ರೈತರ ಸ್ನೇಹಿಯಾಗಬೇಕಿದ್ದ ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿಯ ಮುಖ್ಯ ರಸ್ತೆಯಿಂದ ಎಪಿಎಂಸಿ ಆವರಣಕ್ಕೆ ಉತ್ಪನ್ನ ತುಂಬಿದ ವಾಹನ, ರೈತರ ಎತ್ತಿನ ಬಂಡಿಗಳು ಹೋಗಬೇಕಾದರೆ ಹರಸಾಹಸ ಪಡಬೇಕಿದೆ.
ಸುಸಜ್ಜಿತ ಶೌಚಾಲಯ, ಕುಡಿಯುವ ನೀರು, ರೈತರಿಗೆ ವಿಶ್ರಾಂತಿ ಕೋಣೆಗಳು, ಆಸನಗಳ ಕೊರತೆ... ಹೀಗೆ ಎಪಿಎಂಸಿ ಪ್ರದೇಶ ಮತ್ತು ಕಚೇರಿ ವಿವಿಧ ಸಮಸ್ಯೆಗಳ ಆಗರವಾಗಿದೆ ಎಂದು ರೈತರು ಹೇಳುತ್ತಾರೆ.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಓಡಾಡಲು ಆಗುವುದಿಲ್ಲ. ವರ್ತಕರು ಬೇರೆ ಪಟ್ಟಣಗಳಿಗೆ ಧಾನ್ಯಗಳನ್ನು ಸಾಗಿಸುವ ಲಾರಿಗಳು ಇದೇ ರಸ್ತೆಯಲ್ಲಿ ಮುಗುಚಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಒಳ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಸ್ಥಳೀಯ ವರ್ತಕರು ಆಗ್ರಹಿಸುತ್ತಲೇ ಇದ್ದರೂ ಬೇಡಿಕೆ ಮಾತ್ರ ಈಡೇರಿಲ್ಲ.
ಎಪಿಎಂಸಿಯು 14 ಎಕರೆ 19 ಗುಂಟೆ ಪ್ರದೇಶದ ಬೃಹತ್ ಪ್ರದೇಶ ಹೊಂದಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಆಹಾರ ಧಾನ್ಯ ಬೆಳೆಯುವ ಮತ್ತು ಆವಕ ಆಗುವಂತಹ ಮಾರುಕಟ್ಟೆ ಇದಾಗಿದೆ ಎಂದು ರೈತರು ಹೇಳುತ್ತಾರೆ. ಸರ್ಕಾರದ ಒಟ್ಟು 67 ನಿವೇಶನ ಹಂಚಿಕೆಮಾಡಲಾಗಿದೆ. ಆವರಣದ ಕೊನೆಯ ಭಾಗದ ಮೂಲೆಯಲ್ಲಿ ಎರಡು ನಿವೇಶನಗಳು ಉಳಿದಿದ್ದು, 5 ಸಣ್ಣ ಮತ್ತು 15 ದೊಡ್ಡ ಮಳಿಗೆಗಳಿವೆ. ಟೆಂಡರ್ ಮೂಲಕ ಆಯ್ಕೆ ಮಾಡಿ ವ್ಯಾಪಾರಸ್ಥರಿಗೆ ಪ್ರತಿ ತಿಂಗಳ ಬಾಡಿಗೆ ನೀಡಲಾಗಿದೆ ಎಂದು ಕೃಷಿ ಉತ್ಪನ್ನ ಉಪ ಮಾರುಕಟ್ಟೆ ತಾಲ್ಲೂಕು ಮಟ್ಟದ ಸಿಬ್ಬಂದಿ ಮಾಹಿತಿ ನೀಡಿದರು.
ಪ್ರತಿ ಹಂಗಾಮಿನ ಬೆಳೆ ಕಟಾವು ನಂತರ ಧಾನ್ಯ ಮಾರಾಟಕ್ಕೆ ಬರುವ ರೈತರಿಗೆ ವರ್ತಕರು ಅಂಗಡಿಗಳಲ್ಲಿ ಕುಡಿಯುವ ನೀರು, ಆಸನದ ವ್ಯವಸ್ಥೆ ಮಾಡುತ್ತಿದ್ದಾರೆ. ಆವರಣ ಸುತ್ತಲೂ ಗೋಡೆ ನಿರ್ಮಾಣ ಮಾಡಿಲ್ಲ. ಇಲಾಖೆಯಿಂದ ಮೂಲ ಸೌಕರ್ಯಗಳು ಸಿಕ್ಕಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ ‘ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಅಭಿವೃದ್ಧಿಗಾಗಿ ಕಳೆದ ಸಾಲಿನ ವರ್ಷದಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಸರ್ಕಾರ ಅನುದಾನ ನೀಡದ ಕಾರಣ ಕಾಮಗಾರಿಗಳು ನಡೆದಿಲ್ಲ. ಈಚೆಗೆ ವರ್ತಕರ ನಿಯೋಗ ಶಾಸಕರನ್ನು ಭೇಟಿ ಮಾಡಿ ಕಾಂಕ್ರಿಟ್ ರಸ್ತೆ, ಕುಡಿಯುವ ನೀರು, ಧಾನ್ಯ ಸಂಗ್ರಹಣೆಗೆ ಸಂಗ್ರಹ ಕೋಣಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಒತ್ತಾಯಿಸಲಾಗಿದೆ. ಅದರಂತೆ ಪ್ರಸ್ತುತ ವರ್ಷದಲ್ಲಿ ಅಂದಾಜು ₹3 ಕೋಟಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಅನುದಾನ ಬಿಡುಗಡೆ ನಂತರ ಟೆಂಡರ್ ಪ್ರಕ್ರಿಯೆ ಮೂಲಕ ಮೂಲಸೌಕರ್ಯಗಳು, ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.
ತಾವರಗೇರಾ ಪಟ್ಟಣದ ಎಪಿಎಂಸಿ ಅತ್ಯಧಿಕ ಧಾನ್ಯ ಸಂಗ್ರಹ ತಾಣವಾಗಿದೆ. ಪ್ರಸ್ತುತ ವರ್ಷ ಕುಡಿಯುವ ನೀರು ಸುಸಜ್ಜಿತ ರಸ್ತೆ ನಿರ್ಮಾಣ ಇತರೆ ಅಭಿವೃದ್ಧಿ ಕಾರ್ಯ ಮಾಡಲಾಗುವದುಟಿ.ಸುರೇಶ ತಾವರಗೇರಾ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಕಾರ್ಯದರ್ಶಿ
ತಾವರಗೇರಾ ಎಪಿಎಂಸಿ ಆವರಣದಲ್ಲಿ ರೈತರಿಗೆ ಮೂಲಸೌಕರ್ಯಗಳು ಇಲ್ಲ. ಕಚೇರಿಯ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಕಾಂಪೌಂಡ್ ಸುಸಜ್ಜಿತ ರಸ್ತೆ ನಿರ್ಮಿಸಿದರೆ ಅನೂಕೂಲವಾಗುತ್ತದೆಶರಣಪ್ಪ ಕುಂಬಾರ ಮೆಣೇದಾಳ ಗ್ರಾಮದ ರೈತ
ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳು ರೈತ ಸ್ನೇಹಿಯಾಗಿರಬೇಕು ಎನ್ನುವುದು ಎಲ್ಲರ ಆಶಯ. ಫಸಲುಗಳು ಮಾರಾಟಕ್ಕೆ ಪ್ರಮುಖ ವೇದಿಕೆಯಾಗಬೇಕಿರುವ ಎಪಿಎಂಸಿಗಳು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಕೊಪ್ಪಳಕ್ಕೆ ಇತ್ತೀಚೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭೇಟಿ ನೀಡಿದಾಗ ಎಪಿಎಂಸಿ ಕುರಿತ ಸಮಸ್ಯೆಗಳು ಅನಾವರಣವಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ವಿವಿಧ ಮಾರುಕಟ್ಟೆಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುವ ‘ಎಪಿಎಂಸಿ ನೋಟ’ ಸರಣಿ ಬರಹ ಇಂದಿನಿಂದ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.