ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದ ಮುಖ್ಯರಸ್ತೆ ಬದಿಯಲ್ಲಿರುವ ಡಬ್ಬಿ ಅಂಗಡಿಗಳ ಬೀಗ ಮುರಿದು ಹಣ ಹಾಗೂ ಸಾಮಗ್ರಿಗಳನ್ನು ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿದೆ.
ಡಬ್ಬಿ ಬಂಡಿಗಳ ವ್ಯಾಪಾರಸ್ಥರು ಭಾನುವಾರ ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಅಂಗಡಿಗೆ ಬಾಗಿಲು ತೆರಯಲು ಹೋದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸ್ ಪಡೆಯ 112 ಪೊಲೀಸರು ಭೇಟಿ ನೀಡಿ ಪರಿಶೀಲಿಸಿಸಿದ್ದಾರೆ. ಒಟ್ಟು 12 ಅಂಗಡಿಗಳು ಕಳ್ಳತನವಾಗಿದ್ದು ₹12 ಸಾವಿರ ನಗದು, 70 ಕೇಸರಿ ಶಾಲು ಹಾಗೂ ಇತರೆ ಸಾಮಗ್ರಿಗಳು ಕಳ್ಳತನವಾಗಿವೆ ಎಂದು ವ್ಯಾಪಾರಿಗಳು ಹೇಳಿದರು.
ವ್ಯಾಪಾರಸ್ಥರು ಮಾತನಾಡಿ ‘ಅಂಜನಾದ್ರಿ ಮುಖ್ಯರಸ್ತೆ ಬಳಿ ಹೆಚ್ಚಿನ ಸಂಖ್ಯೆಯ ವಿದ್ಯುತ್ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಬೇಕಿದೆ. ಬಹುತೇಕರು ಸಣ್ಣಪುಟ್ಟ ವ್ಯಾಪರಸ್ಥರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ಮಕ್ಕಳ ಬದುಕು ರೂಪಿಸುತ್ತಿದ್ದೇವೆ. ಸಣ್ಣ ಅವಘಡ ನಡೆದರೂ ನಮ್ಮ ಬದುಕಿಗೆ ದೊಡ್ಡ ಪೆಟ್ಟು ಬೀಳುತ್ತದೆ’ ಎಂದು ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.