ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿ
ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ, ಚರಂಡಿ ನೀರು ಸೇರ್ಪಡೆ, ಪ್ಲಾಸ್ಟಿಕ್ ಚೀಲಗಳ ಹಾವಳಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯು ಅಂಚಿನಲ್ಲಿ ಹೇರಳ ಮದ್ಯದ ಬಾಟಲ್‌ಗಳನ್ನು ಬಿಸಾಡಲಾಗಿದೆ. ಹುಲಿಗಿಯಲ್ಲಿ ಜನ ಸ್ನಾನಮಾಡಿ ಬಿಸಾಡಿದ ಬಟ್ಟೆಗಳು ನದಿಯನ್ನು ಕಲುಷಿತಗೊಳಿಸಿವೆ. ಜಲಜಾಗೃತಿ ಹಾಗೂ ಜನಜಾಗೃತಿಗಾಗಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ತುಂಗಾ ಹಾಗೂ ಭದ್ರಾ ನದಿ ಹರಿಯುವ ಮಾರ್ಗದ ಸಮೀಪದಲ್ಲಿ ಎರಡು ಹಂತಗಳಲ್ಲಿ ಶೃಂಗೇರಿಯಿಂದ ಗಂಗಾವತಿ ತನಕ ನಿರ್ಮಲ ತುಂಗಭದ್ರಾ ಅಭಿಯಾನ ನಡೆಸಿ ಜಾಗೃತಿ ಮೂಡಿಸಿದೆ. ಮೂರನೇ ಹಂತದ ಪಾದಯಾತ್ರೆ ಡಿಸೆಂಬರ್ 27ರಿಂದ ಗಂಗಾವತಿಯಿಂದ ಆರಂಭವಾಗಲಿದೆ. ಇಷ್ಟೆಲ್ಲ ಜಲಜಾಗೃತಿ ಕೆಲಸ ನಡೆದರೂ ತುಂಗಭದ್ರಾ ಮಲೀನವಾಗುತ್ತಲೇ ಇದೆ. ಪಾದಯಾತ್ರೆಯಲ್ಲಿ ತಂಡ ಕಂಡುಕೊಂಡ ಅಂಶಗಳನ್ನು ಆಧರಿಸಿ ಪ್ರಮೋದ ಕುಲಕರ್ಣಿ ವಿಶೇಷ ವರದಿ ಬರೆದಿದ್ದಾರೆ.
ಘನತ್ಯಾಜ್ಯ ಸಂಗ್ರಹಣೆ ಹಾಗೂ ಸುರಕ್ಷಿತ ವಿಲೇವಾರಿಗೆ ಅನೇಕ ಕಡೆ ವ್ಯವಸ್ಥೆಗಳು ಇದ್ದರೂ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯವನ್ನು ನದಿಗೆ ಹರಿಸಲಾಗುತ್ತಿದೆ.
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಅಣೆಕಟ್ಟು ಸುತ್ತಮುತ್ತಲಿನ ಬೆಟ್ಟ ಸಾಲುಗಳಲ್ಲಿ ದಶಕಗಳ ಕಾಲ ನಡೆದ ಮೈನಿಂಗ್‌ನಿಂದಾಗಿ ಮತ್ತು ಬಹುತೇಕ ಗ್ರಾಮಗಳ ಚರಂಡಿ ನೀರು ನೇರ ನದಿಗೆ ಸೇರಿರುವ ಕಾರಣ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ.
ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗೆ ಹೊಂದಿಕೊಂಡ ಜಲಾಶಯದ ಹಿನ್ನೀರಿನ ನೀರು ಬಳಸಿಕೊಂಡು ನೂರಾರು ಸಣ್ಣ, ಅತಿಸಣ್ಣ ಮತ್ತು ಬೃಹತ್ ಕೈಗಾರಿಕೆಗಳು ಎರಡೂ ಜಿಲ್ಲೆಗಳನ್ನು ರೋಗಗ್ರಸ್ತವನ್ನಾಗಿ ಮಾಡಿವೆ.
ತುಂಗಭದ್ರೆಯ ನೀರಿನ ಬಳಕೆಯಿಂದಾಗಿ ಸರ್ವೆಸಾಮಾನ್ಯವಾಗಿ ದೀರ್ಘಕಾಲೀನ ಚರ್ಮ ಕಾಯಿಲೆ, ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಕುಂಠಿತ ಪ್ರಕರಣಗಳು ಅಲ್ಲಲ್ಲಿ ಕಂಡುಬಂದಿವೆ.
ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ, ಶಿವಪುರದ ಮಾರ್ಕೆಂಡೇಯ ದೇವಸ್ಥಾನ, ಅಂಜನಾದ್ರಿ ಸಮೀಪದ ಋಷ್ಯಮುಖ ಪರ್ವತ, ಆನೆಗೊಂದಿಯ ಚಿಂತಾಮಣಿ, ಪಂಪಾ ಸರೋವರ, ನವವೃಂದಾವನ ತೀರ್ಥಕ್ಷೇತ್ರಗಳಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರು ನದಿಯಲ್ಲಿ ಯಥೇಚ್ಛವಾಗಿ ಶಾಂಪೂ, ಸೋಪು ಬಿಸಾಡುತ್ತಾರೆ. ಇದು ನೇರವಾಗಿ ನದಿಯನ್ನು ಸೇರುತ್ತಿರುವುದರಿಂದ ಕಲುಷಿತವಾಗುತ್ತಿದೆ.
ದೇಶ, ವಿದೇಶಗಳಿಂದ ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡೆ, ಆನೆಗೊಂದಿ ಹಾಗೂ ಅಂಜನಾದ್ರಿಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರಿಂದ ಮೋಜು ಮಸ್ತಿ ನಡೆಯುತ್ತದೆ. ಇದರಿಂದಲೂ ನದಿ ಮಲಿನಗೊಳ್ಳುತ್ತಿದೆ.
ಗಂಗಾವತಿ ನಗರದಲ್ಲಿ ವೈಜ್ಞಾನಿಕವಾಗಿ ಚರಂಡಿ ಹಾಗೂ ತ್ಯಾಜ್ಯದ ನೀರು ಶುದ್ಧೀಕರಣವಾಗದ ಕಾರಣ ನಗರದ ಮಧ್ಯಭಾಗದಲ್ಲಿರುವ ದುರ್ಗಮ್ಮನ ಹಳ್ಳ ಚರಂಡಿಯಂತಾಗಿದೆ.
ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ಹರಿದು ಬರುವ ತುಂಗಭದ್ರಾ ನದಿಯ ನೀರು ಅಮೃತ ಸಮಾನವೆಂಬುದು ಈಗ ಕೇವಲ ವಾಡಿಕೆಯಾಗಿದೆ. ಪ್ರಸ್ತುತ ಈ ನೀರು ಗಂಗಾವತಿ ಭಾಗ ತಲುಪುವ ಹೊತ್ತಿಗೆ ಅಕ್ಷರಶಃ ವಿಷವಾಗುತ್ತಿದೆ.
ತುಂಗಭದ್ರಾ ಅಣೆಕಟ್ಟೆ ಹೂಳು ತೆಗೆಯುವುದು.
ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ನದಿಪಾತ್ರದ ನಗರ ಮತ್ತು ಗ್ರಾಮಗಳ ಜನರ ಸಮಗ್ರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಬೇಕು.
ಸಾವಯವ, ಮಿಶ್ರ ಮತ್ತು ಪರ್ಯಾಯ ಬೆಳೆಗಳ ಮೂಲಕ ಮಣ್ಣಿನ ಫಲವತ್ತತೆ ಮತ್ತು ರಾಸಾಯನಿಕಮುಕ್ತ ಆಹಾರದಿಂದ ಜನರ ಆರೋಗ್ಯ ಕಾಪಾಡಬೇಕು.
ನದಿ ಪಾತ್ರದ ನಗರಗಳ ಮತ್ತು ಎಲ್ಲ ಗ್ರಾಮಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ನಿರಂತರ ನಿರ್ವಹಣೆ ಮಾಡಬೇಕು.
ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಸ್ನಾನಘಟ್ಟಗಳಲ್ಲಿ ಭಕ್ತರು ಶಾಂಪೂ, ಸೋಪು ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಬಟ್ಟೆಗಳನ್ನು ನದಿಯಲ್ಲಿ ಬಿಸಾಡದಂತೆ ಕ್ರಮ ವಹಿಸಬೇಕು.
ಗಂಗಾವತಿ ನಗರದ ದುರ್ಗಮ್ಮನ ಹಳ್ಳ ಸಮಗ್ರ ಜೀರ್ಣೋದ್ಧಾರ ಮಾಡಿ ಶುದ್ಧ ನೀರಿನ ಜಲಮೂಲಗಳನ್ನಾಗಿ ಮಾಡಬೇಕು.
ತುಂಗಭದ್ರಾ ನದಿಯಲ್ಲಿ ಅಕ್ರಮ ಮತ್ತು ಅವೈಜ್ಞಾನಿಕ ಮರಳು ಗಣಿಗಾರಿಕೆಯನ್ನು ನಿಷೇಧಿಸಬೇಕು.
ನದಿ ನೀರು ಕಲುಷಿತ ಮಾಡುವವರು ಹಾಗೂ ನಿರ್ಲಕ್ಷ್ಯ ವಹಿಸುವವರ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಜಲಮೂಲ, ಕೆರೆಕಟ್ಟಿ, ಹಳ್ಳ, ತೊರೆ ಹಾಗೂ ನದಿಗಳ ಸಂರಕ್ಷಣೆಗಾಗಿ ಜೀವಜಲ ಸಂರಕ್ಷಣಾ ಸಮಿತಿಯನ್ನು ರಚಿಸಬೇಕು.
ಸಾರ್ವಜನಿಕರಲ್ಲಿ ನಿರಂತರವಾಗಿ ಜಲಜಾಗೃತಿ ಮತ್ತು ಸ್ವಚ್ಛತಾ ಜಾಗೃತಿ ಮೂಡಿಸಬೇಕು.
ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಇದೇ ವರ್ಷದ ಡಿಸೆಂಬರ್ 27ರಿಂದ ಗಂಗಾವತಿಯಿಂದ ಆರಂಭವಾಗಲಿದೆ. ಕಂಪ್ಲಿ, ಶ್ರೀರಾಮನಗರ, ಕಾರಟಗಿ, ಸಿಂಧನೂರು, ಮಾನ್ವಿ, ನೀರಮಾನ್ವಿ, ಗೋರಕಲ್, ಎಲೆಬಿಚ್ಚಾಲಿ ಮಾರ್ಗದ ಮೂಲಕ ಮಂತ್ರಾಲಯ ತಲುಪಿ ಜ. 4ರಂದು ಸಮಾರೋಪಗೊಳ್ಳಲಿದೆ ಎಂದು ಪರ್ಯಾವರಣ ಟ್ರಸ್ಟ್ ಸಂಚಾಲಕ ಬಾಲಕೃಷ್ಣ ನಾಯ್ಡು ತಿಳಿಸಿದರು. ಈ ಪಾದಯಾತ್ರೆಯ ಯಶಸ್ಸಿಗೆ ಸಂಘಟಕರು ಮಾರ್ಗದ ಊರುಗಳಲ್ಲಿ ಜನಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.