ಅಳವಂಡಿ (ಕೊಪ್ಪಳ ಜಿಲ್ಲೆ): ಇಲ್ಲಿನ ಶಾಂತಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕಲ್ಯಾಣ ಕರ್ನಾಟಕ ಉತ್ಸವ, ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಒಂದೇ ಧ್ವಜ ಏರಿಸಿ ಗೌರವ ಸಲ್ಲಿಸಲಾಗುತ್ದಿದೆ.
ಸ್ವಾತಂತ್ರ್ಯ ಹೋರಾಟಗಾರ ಅಳವಂಡಿಯ ಶಿವಮೂರ್ತಿಸ್ವಾಮಿಗಳು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅಂತಿಮ ಪದವಿಯ ವ್ಯಾಸಂಗ ಮಾಡುತ್ತಿದ್ದಾಗ ಮಹಾತ್ಮ ಗಾಂಧಿ ಅವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು.
ಅಳವಂಡಿಯ ಶಿವಮೂರ್ತಿಸ್ವಾಮಿಗಳಿಗೆ ಕರಿಸಿದ್ದಸ್ವಾಮಿ ಇನಾಮದಾರ, ಪಂಚಪ್ಪ ಶೆಟ್ಟರ , ಶಿವಪ್ಪ ಬಣಗಾರ, ಜೀವಪ್ಪ ಕಾರೆ, ಪಕೀರಡ್ಡೇಪ್ಪ ಗದ್ದಿಕೇರಿ, ಸಿದ್ದಲಿಂಗಪ್ಪ ಶೆಟ್ಟರ, ಶಿವಲಿಂಗಪ್ಪ, ಪರಮೇಶಪ್ಪ ಕಲ್ಗುಡಿ ಸೇರಿದಂತೆ ಗ್ರಾಮದ ಅನೇಕರು ಸ್ವಾತಂತ್ರ್ಯ ಕೈಜೋಡಿಸಿದರು.
1982ರಿಂದ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದ ಮುಂದೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗ್ರಾಮಸ್ಥರು ಧ್ವಜಾರೋಹಣ ಮಾಡುತ್ತಿದ್ದಾರೆ.
ಮೊದಲು ಅಳವಂಡಿಯ ಶಿವಮೂರ್ತಿ ಸ್ವಾಮಿಗಳ ನೇತೃತ್ವದಲ್ಲಿ ಧ್ವಜಾರೋಹಣ ನಡೆಯುತ್ತಿತ್ತು. ಬಳಿಕ ಸ್ವಾತಂತ್ರ್ಯ ಹೋರಾಟಗಾರ ಕರಿಸಿದ್ದಸ್ವಾಮಿ ಇನಾಮದಾರ ಅವರ ಪತ್ನಿ ಅನ್ನಪೂರ್ಣದೇವಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಸದ್ಯ ಇವರ ಮಗ ಶಿವಪ್ರಕಾಶಸ್ವಾಮಿ ಇನಾಮದಾರ, ಸ್ವಾತಂತ್ರ್ಯ ಹೋರಾಟಗಾರ ಕುಟುಂಬಸ್ಥರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಬಳಕೆ ಮಾಡಿದ ಧ್ವಜವನ್ನೇ ಪ್ರತಿವರ್ಷ ಮೂರು ಬಾರಿ ಇಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.
‘ಸ್ವಾತಂತ್ರ್ಯ ಹೋರಾಟಗಾರ ಹಾರಿಸಿದ ಧ್ವಜವನ್ನು ಈಗಲೂ ಇಟ್ಟುಕೊಂಡು ಅದನ್ನು ಏರಿಸಿ ಗೌರವ ಸಲ್ಲಿಸುವುದು ಇಲ್ಲಿನ ವಿಶೇಷ’ ಎಂದಿಉ ನಿವೃತ್ತ ಪ್ರಾಚಾರ್ಯ ಎಂ.ಎಸ್.ಹೊಟ್ಟಿನ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.