ತಾವರಗೇರಾ: ಮನೆ ಮುಂದಿನ ಅಂಗಳದಲ್ಲಿ ಕಲುಷಿತ ನೀರು ತುಂಬಿದ ಡಬ್ಬಿಗಳು, ರಸ್ತೆಯಲ್ಲಿ ನಿಂತ ನೀರು, ಮನೆ ಚಾವಣಿಯಲ್ಲಿ ರಾಶಿ ರಾಶಿಗಟ್ಟಲೇ ಬಿದ್ದ ಖಾಲಿಡಬ್ಬಿಗಳು ಹಾಗೂ ಬಾಟಲಿಗಳು.
ಇದು ಇಲ್ಲಿಗೆ ಸಮೀಪದ ಕಿಲ್ಲಾರಹಟ್ಟಿ ತಾಂಡಕ್ಕೆ ಬುಧವಾರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮನೆ ಮನೆ ಭೇಟಿ ನೀಡಿದಾಗ ಕಂಡುಬಂದ ಚಿತ್ರಣ. ತಾಂಡಾದಲ್ಲಿ ಈ ರೀತಿಯ ಅನೈರ್ಮಲ್ಯ ವಾತಾವರಣ ಇರುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಅನೇಕರು ಅನಾರೋಗ್ಯಪೀಡಿತರಾಗಿದ್ದಾರೆ. ಪದೇ ಪದೇ ಜನರ ಆರೋಗ್ಯ ಹದಗೆಡಲು ಈ ಸ್ಥಿತಿ ಕಾರಣವೂ ಆಗುತ್ತಿದೆ.
ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡದಲ್ಲಿ ಕಳೆದ ಒಂದು ವಾರದಿಂದ ಜನರು ಡೆಂಗಿ ಲಕ್ಷಣ ಕಾಣಿಸಿಕೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ ಮುದೇನೂರು ಸಮುದಾಯ ಆರೋಗ್ಯ ಕೇಂದ್ರದ ಡಾ.ಜಿ.ಸಿ. ಪಾಟೀಲ್ ನೇತೃತ್ವದ ತಂಡ ಸದ್ಯ ತಾಂಡದಲ್ಲಿ ಬೀಡು ಬಿಟ್ಟಿದ್ದು, ಅನಾರೋಗ್ಯಪೀಡಿತ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸ್ವಚ್ಛತೆ ಕಾಯ್ದುಕೊಳ್ಳುವಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಮಂಗಳವಾರ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪಿಸಿ ಪ್ರತಿ ಮನೆಯವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದುವರೆಗೆ 47 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ತಾಂಡಾದಲ್ಲಿ ಡೆಂಗಿ ಲಕ್ಷಣ ಕಂಡು ಬಂದಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಮನೆಯಲ್ಲಿ ಲಾರ್ವಾ ಸರ್ವೆ ಮತ್ತು ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ತಾಂಡದಲ್ಲಿ ಆರೋಗ್ಯ ಇಲಾಖೆ ತಂಡವು ಮನೆ ಮುಂದಿನ ಪ್ಲಾಸ್ಟಿಕ್ ಡಬ್ಬಿಗಳನ್ನು ತಾವೇ ಸ್ವತಃ ತೆರವು ಮಾಡಿದರು. ಗ್ರಾಮದ ದೇವಸ್ಥಾನದ ಕೇಂದ್ರದಲ್ಲಿ ತಪಾಸಣೆ ಮಾಡಲಾಗುತ್ತಿದೆ.
ಕಿಲ್ಲಾರಹಟ್ಟಿ ತಾಂಡಾ ಜನ ಹೆಚ್ಚಾಗಿ ದುಡಿಯಲು ಗುಳೆ ಹೋಗುತ್ತಾರೆ. ಅಲ್ಲಿ ವಾತಾವರಣದಿಂದ ಡೆಂಗಿ ಲಕ್ಷಣ ಕಂಡುಬಂದಿರಬಹುದು. ಮನೆ ಅಂಗಳದಲ್ಲಿ ಸ್ವಚ್ಛತೆಯೂ ಇಲ್ಲ. ನಮ್ಮ ಸಿಬ್ಬಂದಿ ಭೇಟಿ ನೀಡಿದಾಗ ಲಾರ್ವಾ ಕಂಡುಬಂದಿವೆಡಾ.ಜಿ.ಸಿ ಪಾಟೀಲ್ ಆಡಳಿತ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಮುದೇನೂರು
ನಮ್ಮ ಮನೆಯಲ್ಲಿಯೂ ಒಬ್ಬರಿಗೆ ಡೆಂಗಿ ಲಕ್ಷಣ ಕಂಡುಬಂದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಿಳಿರಕ್ತ ಕಣಗಳು ಕಡಿಮೆ ಇದ್ದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಹರೀಶ ನಾಯಕ ಕಿಲ್ಲಾರಹಟ್ಟಿ ತಾಂಡ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.