ಕಾರಟಗಿ: ಸರ್ಕಾರದ ವಿವಿಧ ಅನುದಾನ ಬಳಸಿಕೊಳ್ಳುವಲ್ಲಿ ಪಟ್ಟಣದ ಪುರಸಭೆ ಮುಂದಿದ್ದರೂ, ಅದನ್ನು ಸಾರ್ಥಕತೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ಅವುಗಳ ಬಾಡಿಗೆ ಹಣವೇ ಪಟ್ಟಣದ ಅಭಿವೃದ್ಧಿಗೆ ಸಹಕಾರಿ ಎಂಬ ಲೆಕ್ಕಾಚಾರದೊಂದಿಗೆ ನಿರ್ಮಿಸಿರುವ ಸಂಕೀರ್ಣಗಳು ಉದ್ಘಾಟನೆಗೂ ಮುನ್ನವೇ ಸಾರ್ವಜನಿಕ ಶೌಚಾಲಯಗಳಾಗಿ ಮಾರ್ಪಾಡಾಗುತ್ತಿವೆ.
ಪಟ್ಟಣದ ಹಳೆಯ ಸಂತೆ ಮಾರುಕಟ್ಟೆ (ಗಿರಿಜಾ ಮಹಿಳಾ ಮಂಡಳದ ಪಕ್ಕ) ನಿರ್ಮಿಸಿದ ವಾಣಿಜ್ಯ ಮಳಿಗೆಗಳ ಮೇಲಂತಸ್ತಿಗೆ ಹೋಗುವ ಮೆಟ್ಟಿಲುಗಳ ಪಕ್ಕ, ಮೇಲಂತಸ್ತಿನಲ್ಲಿ ಅನೇಕರು ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕ್ರಮಕ್ಕೆ ಮುಂದಾಗಬೇಕಾದ ಪುರಸಭೆ ಮಾತ್ರ ಮೌನಕ್ಕೆ ಜಾರಿದೆ ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಇದೇ ವಾಣಿಜ್ಯ ಸಂಕೀರ್ಣದ ಮುಂಭಾಗದ ರಾಜ್ಯ ಹೆದ್ದಾರಿಯ ಮಳಿಗೆಗಳ ಮೇಲ್ಭಾಗದಲ್ಲಿ ನಿರ್ಮಿಸಿದ ಮಳಿಗೆಗಳು ಕೂಡ ವರ್ಷಗಳಾದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಹಿಂದಿನ ಆಡಳಿತ ಮಂಡಳಿಯು ಅಧಿಕಾರದಿಂದ ನಿರ್ಗಮಿಸುವ ಸಂದರ್ಭದಲ್ಲಿ ತರಾತುರಿಯಾಗಿ ಉದ್ಘಾಟನೆ ಮಾಡಿದ್ದರೂ ಲೆಕ್ಕಕ್ಕಿಲ್ಲದೇ ಅನಾಥವಾಗಿ ಉಳಿದಿವೆ.
ಹಳೆಯ ಸಂತೆ ಮಾರುಕಟ್ಟೆ, ರಾಜ್ಯ ರಸ್ತೆ ಮುಂಭಾಗದ ಮೇಲಂತಸ್ತಿನಲ್ಲಿ ನಿರ್ಮಿಸಿದ ಮಳಿಗೆಗಳು, ಸಹಕಾರಿ ಸಂಘಕ್ಕೆ ತೆರಳುವ ರಸ್ತೆಯಲ್ಲಿ ನಿರ್ಮಿಸಿದ ಹಾಗೂ ಗ್ರಾಮೀಣ ಸಂತೆ ಮೈದಾನದ ಮುಂಭಾಗದಲ್ಲಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳಿಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಆದರೆ ಪುರಸಭೆಗೆ ಮಾತ್ರ ನಯಾ ಪೈಸೆ ಆದಾಯ ಬರುತ್ತಿಲ್ಲ.
ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಸ್ಥಳೀಯಾಡಳಿತ ಸಾರ್ವಜನಿಕವಾಗಿ ಪ್ರಚಾರ ನಡೆಸದೇ ನಡೆಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅವೈಜ್ಞಾನಿಕ ಬಾಡಿಗೆ ದರದಿಂದ ಹರಾಜಿಗೆ ಜನ ಬರುತ್ತಿಲ್ಲ ಎಂಬ ಮಾತುಗಳಿವೆ.
ಪುರಸಭೆ ಮುಖ್ಯಾಧಿಕಾರಿ, ಆಡಳಿತ ಮಂಡಳಿಯವರು ಬಾಡಿಗೆ ದರ ಪರಿಷ್ಕರಣೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ‘ಸ್ಥಳೀಯ ಪ್ರದೇಶ, ಪಟ್ಟಣದಲ್ಲಿರುವ ಬಾಡಿಗೆ ದರ ತುಲನೆ ಮಾಡಿ ಪರಿಷ್ಕೃತ ದರ ನಿಗದಿಯಾಗಬಹುದು. 4 ಬಾರಿ ಹರಾಜು ನಡೆಸಿದರೂ ಜನ ಉತ್ಸುಕತೆ ತೋರುತ್ತಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ತಿಳಿಸಿದರು.
ಇರುವ ವಾಣಿಜ್ಯ ಮಳಿಗೆಗಳು ಬಳಕೆಯಾಗಬೇಕು. ಸ್ಥಳೀಯ ಆಡಳಿತಕ್ಕೆ ಆದಾಯ ಲಭಿಸಬೇಕು ಎನ್ನುವ ಕಾಳಜಿಯಿಂದ ಮುಖ್ಯಾಧಿಕಾರಿಗೆ ನಿವಾಸಿಗಳು ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ.
Quote - ಹಳೆಯ ಸಂತೆ ಬಯಲಿನಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಕೆಲವರು ಶೌಚಾಲಯವಾಗಿ ಪರಿವರ್ತಿಸಿಕೊಂಡಿರುವುದು ದುರದೃಷ್ಟಕರ. ಶೀಘ್ರವೇ ಉಳಿದ ಕಾಮಗಾರಿ ಮುಗಿಸಿ ಹರಾಜು ನಡೆಸಲಾಗುವುದು ಸುರೇಶ ಮುಖ್ಯಾಧಿಕಾರಿ ಪುರಸಭೆ ಕಾರಟಗಿ
Quote - ದೊಡ್ಡ ಮೊತ್ತದ ಬಾಡಿಗೆ ನಿಗದಿ ಮಾಡಿದ್ದರಿಂದ ಜನ ಮಳಿಗೆ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ. ದುರ್ಬಳಕೆಯಾಗುತ್ತಿದ್ದರೂ ಕ್ರಮವಾಗಿಲ್ಲ. ಮಳಿಗೆ ಒಳಗೆ ಹೋಗದಂತೆ ಗೇಟ್ ಅಳವಡಿಸಬೇಕಿದೆ. ತಿಪ್ಪಣ್ಣ ಮೂಲಿಮನಿ ಸ್ಥಳೀಯ ಕಾರಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.