ADVERTISEMENT

ಕಾರಟಗಿ | ಅದ್ದೂರಿಯ ವಾಲ್ಮೀಕಿ ಜಯಂತಿ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 6:40 IST
Last Updated 28 ಅಕ್ಟೋಬರ್ 2025, 6:40 IST
ಕಾರಟಗಿಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು
ಕಾರಟಗಿಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು   

ಕಾರಟಗಿ: ‘ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಜಯಂತಿಯು ಆಚರಣೆಗೆ ಸೀಮಿತವಾಗದೇ, ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹೆಚ್ಚು ಸಾರ್ಥಕವಾಗುವುದು. ಸಂಘಟಿತವಾಗಿ ಜಯಂತಿ ಆಚರಿಸುವ ಸಮಾಜವು ಮಕ್ಕಳ ಭವಿಷ್ಯಕ್ಕೆ ಅಡಿಪಾಯವಾಗಿರುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣ ಸಂಸ್ಥೆ ಕಟ್ಟಲು ಮುಂದಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಲಹೆ ನೀಡಿದರು.

ಪಟ್ಟಣದ ಪದ್ಮಶ್ರೀ ಕನ್‌ವೆನ್ಷನ್ ಹಾಲ್‍ನಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹ 5 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದು, ಶೇ 25ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ವಾಲ್ಮೀಕಿ ಸಮಾಜವು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರೆ ಸರ್ಕಾರದಿಂದ ಸಕಲ ಸೌಲಭ್ಯಗಳನ್ನು ಒದಗಿಸಲು ಬದ್ಧ’ ಎಂದು ಹೇಳಿದರು.

ADVERTISEMENT

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ‘ಕರ್ನಾಟಕದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪ ಸಹಿತ ವಿವಿಧ ಕ್ಷೇತ್ರಗಳಲ್ಲಿ ನಾಯಕ ಸಮುದಾಯದ ಕೊಡುಗೆ ಅಪಾರವಾಗಿದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಜನಪ್ರತಿನಿಧಿಗಳಾದ ನಾವೆಲ್ಲರೂ ಸ್ಪಂದಿಸುತ್ತೇವೆ’ ಎಂದು ಹೇಳಿದರು.

ಮುಖಂಡರಾದ ಶಿವರೆಡ್ಡಿ ನಾಯಕ ಹಾಗೂ ನಾಗರಾಜ ಬಿಲ್ಗಾರ ಮಾತನಾಡಿ, ‘ಸಮಾಜಕ್ಕೆ ಸರ್ಕಾರದ ಮಟ್ಟದಲ್ಲಿ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ವಿಚಾರಧಾರೆಗಳ ಕುರಿತು ಸಂಶೋಧಕ ಡಿ.ಕೆ.ಮಾಳೆ ವಿಶೇಷ ಉಪನ್ಯಾಸ ನೀಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೆರವಣಿಗೆ: ಪಟ್ಟಣದ ವಿಶೇಷ ಎಪಿಎಂಸಿಯಿಂದ ಭವ್ಯ ಮೆರವಣಿಗೆ ನಡೆಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ, ಕಳಸ ಹೊತ್ತು ಗಮನ ಸೆಳೆದರು. ರಾಮಾಯಣದ ಪ್ರಮುಖ ಪಾತ್ರಧಾರಿಗಳಾದ ರಾಮ, ಲಕ್ಷಣ, ಆಂಜನೇಯ ಪ್ರತಿರೂಪದ ಪಾತ್ರಧಾರಿಗಳಾಗಿ ಆಗಮಿಸಿದ್ದ ಬುಡ್ಗ ಜಂಗಮ ವೇಷಗಾರರ ನೃತ್ಯ ಜನರ ಕಣ್ಮನ ಸೆಳೆಯಿತು.

ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಸಮಾಜದವರು ವಾಹನಗಳಿಗೆ ವಾಲ್ಮೀಕಿ ಭಾವಚಿತ್ರ ಸೇರಿದಂತೆ ಸಮುದಾಯದ ಐತಿಹಾಸಿಕ ವೀರ, ಶೂರರ ಭಾವಚಿತ್ರದ ಫ್ಲೆಕ್ಸ್‌ಗಳನ್ನು ಕಟ್ಟಿಕೊಂಡು ಗಮನ ಸೆಳೆದರು. ಕಹಳೆ ವಾದನ, ತಾಷಾ, ಡೋಲು, ಗೊಂಬೆ ಕುಣಿತ, ಕೀಲು ಕುದುರೆ, ಡೊಳ್ಳು, ಝಾಂಜ್ ಮೇಳ ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.

ಹುಲಿಹೈದರ ಸಂಸ್ಥಾನದ ರಾಜಾ ನವೀನಚಂದ್ರ ನಾಯಕ, ಮರುಳಸಿದ್ದಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ತಾಲ್ಲೂಕು ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಗಿರಿಯಪ್ಪ ಬೂದಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ಮಾಜಿ ಸದಸ್ಯ ವೀರೇಶ ಸಾಲೋಣಿ, ಶಿಕ್ಷಣ ಪ್ರೇಮಿ ಸೂರಿಬಾಬು ನೆಕ್ಕಂಟಿ, ಪ್ರಮುಖರಾದ ಹನುಮೇಶ ನಾಯಕ ಹುಲಿಹೈದರ, ಜೋಗದ ಹನುಮಂತಪ್ಪ ನಾಯಕ, ನಾರಾಯಣಪ್ಪ ಜೋಗದ, ರೆಡ್ಡಿ ಶ್ರೀನಿವಾಸ, ಚನ್ನಬಸಪ್ಪ ಸುಂಕದ, ಅಯ್ಯಪ್ಪ ಉಪ್ಪಾರ, ಉದ್ಯಮಿ ಎನ್. ಶ್ರೀನಿವಾಸ, ನಾಗನಗೌಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ವಕೀಲರ ಸಂಘದ ಉಪಾಧ್ಯಕ್ಷ ಪರಸಪ್ಪ ನಾಯಕ, ತಹಶೀಲ್ದಾರ್ ಎಂ.ಕುಮಾರಸ್ವಾಮಿ, ತಾ.ಪಂ ಇಒ ಲಕ್ಷ್ಮೀದೇವಿ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗ್ಯಾನನಗೌಡ, ಅಧಿಕಾರಿಗಳು, ಸಮಾಜದವರು ಉಪಸ್ಥಿತರಿದ್ದರು.

ಶಿಕ್ಷಕ ಶಿವರಾಜಕುಮಾರ, ಸೋಮನಾಥ ಹೆಬ್ಬಡದ ವಕೀಲ, ರಮೇಶ ನಾಯಕ ಜೂರಟಗಿ, ದೇವರಾಜ ನಾಯಕ ಜೂರಟಗಿ ಕಾರ್ಯಕ್ರಮ ನಿರ್ವಹಿಸಿದರು.

ಕುಮಾರರಾಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಯತ್ನ

‘ಕ್ಷೇತ್ರದ ಕಾರಟಗಿ ಹಾಗೂ ಕನಕಗಿರಿ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ಜಾಗವನ್ನು ನಿಗದಿಪಡಿಸಲಾಗಿದೆ. 15 ದಿನದಲ್ಲಿ ತಲಾ ₹2 ಕೋಟಿ ವೆಚ್ಚದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಐತಿಹಾಸಿಕ ಮಹತ್ವದ ಪ್ರದೇಶವಾಗಿರುವ ಗಂಡುಗಲಿ ಕುಮಾರರಾಮನ ಕ್ಷೇತ್ರದ ಅಭಿವೃದ್ಧಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.