ADVERTISEMENT

ವಿದೇಶದಿಂದ ಬಂದು ಮತದಾನ: ಹಿರಿಯ ಜೀವಿಗಳ ಉತ್ಸಾಹ

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ: ಎಲ್ಲೆಡೆ ಬಿಗಿ ಭದ್ರತೆ

ಸಿದ್ದನಗೌಡ ಪಾಟೀಲ
Published 30 ಏಪ್ರಿಲ್ 2019, 17:17 IST
Last Updated 30 ಏಪ್ರಿಲ್ 2019, 17:17 IST
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮತ ಚಲಾಯಿಸಿದ ಭೂತಾನ್ ದೇಶದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನುಪಮಾ ಸಾಲಿ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮತ ಚಲಾಯಿಸಿದ ಭೂತಾನ್ ದೇಶದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನುಪಮಾ ಸಾಲಿ   

ಕೊಪ್ಪಳ:ಮತದಾನ ಮಾಡುವಂತೆ ಚುನಾವಣಾ ಆಯೋಗ, ಸೆಲೆಬ್ರಿಟಿಗಳು, ಐಕಾನ್‍ಗಳು, ಸಿನಿ ತಾರೆಯರು, ಕ್ರಿಕೆಟಿಗರು, ಸ್ವೀಪ್ ಸಮಿತಿ ಎಷ್ಟೇ ಜಾಗೃತಿ ಮಾಡಿದರೂ ತಮ್ಮೂರಲ್ಲೇ ಇದ್ದು ಮತ ಹಾಕದೇ ನಿರ್ಲಕ್ಷ್ಯ ತೋರುವ ಮತದಾರರ ಮಧ್ಯೆ ವಿದೇಶಗಳಿಂದ ಲಕ್ಷಾಂತರ ಹಣ ಖರ್ಚು ಮಾಡಿ ಮತ ಹಾಕಿದ್ದು ಈ ಲೋಕಸಭಾ ಚುನಾವಣೆಯ ವಿಶೇಷ.

ಮತದಾನ ಮಾಡುವ ಸಲುವಾಗಿಯೇ ವಿದೇಶದಿಂದಬಂದು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದಾರೆ. ಅಮೆರಿಕದಿಂದ ಕಾರಟಗಿ ತಾಲ್ಲೂಕಿನ ಯರಡೋಣ ಗ್ರಾಮಕ್ಕೆ ಮತದಾನ ಮಾಡಲು ಅಭಿಷೇಕ್ ಪಾಟೀಲಬಂದು ತಮ್ಮ ಹಕ್ಕು ಚಲಾಯಿಸಿದರು. ಅಲ್ಲದೆ ಮತದಾನ ಜಾಗೃತಿ ಮೂಡಿಸಿದರು.

ಭೂತಾನ್‍ನಿಂದ ಬಂದ ಪ್ರಾಧ್ಯಾಪಕಿ:ಮತದಾನ ಮಹತ್ವ ತಿಳಿಸಲು ಭೂತಾನ್ ದೇಶದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನುಪಮಾ ಮಸಾಲಿ ಮಂಗಳವಾರ ಬೆಳಗ್ಗೆ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 1ರಲ್ಲಿ ಮತದಾನ ಮಾಡಿದರು.

ADVERTISEMENT

ಮೂಲತಃ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿಯಾದ ಅನುಪಮಾ, ಭೂತಾನ್ ದೇಶದ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಲ್ಲಿವರೆಗೂ ಸತತ ಎಲ್ಲ ಚುನಾವಣೆಯಲ್ಲೂ ಮತದಾನ ಮಾಡುವ ಮೂಲಕ ವಯೋವೃದ್ಧೆ ಎಲ್ಲರ ಗಮನ ಸೆಳೆದರು. ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ರಾಜೂರ ಗ್ರಾಮದ ಯಲ್ಲವ್ವ ಶಿವಪ್ಪ ಎಂಬವೃದ್ಧೆ ತಮ್ಮ 89ನೇ ವಯಸ್ಸಿನಲ್ಲಿ ಮತದಾನ ಮಾಡುವ ಮೂಲಕ ಯುವ ಮತದಾರರನ್ನೂ ನಾಚಿಸಿದರು.

ಮೂರು ತಲೆಮಾರುಗಳಿಂದ ಮತದಾನ:1952ರ ಪ್ರಥಮ ಲೋಕಸಭಾ ಚುನಾವಣೆಯಿಂದ 2019ರ 16ನೇ ಚುನಾವಣೆಯಲ್ಲಿ ಮತದಾನ ಮಾಡಿದ ಅಜ್ಜ, ಮಗ ಹಾಗೂ ಹೊಸ ಮತದಾರನಾಗಿ ಮೊಮ್ಮಗ ಇವರು ಒಟ್ಟಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ಇನ್ನೊಂದು ವಿಶೇಷ. ನಗರದಸಿಂಪಿಲಿಂಗಣ್ಣ ರಸ್ತೆಯ ನಿವಾಸಿಗಳಾದ ಹನುಮೇಶರಾವ ಕರಣಂ, ಮೋಹನರಾವ ಕರಣಂ, ಮನೋಜ ಕರಣಂ 21ನೇ ವಾರ್ಡ್‍ನಲ್ಲಿನ ಮತಗಟ್ಟೆಯಲ್ಲಿ ಒಟ್ಟಿಗೆ ಮತದಾನ ಮಾಡುವ ಮೂಲಕ ಮಾದರಿಯಾದರು.

ಮೂವರು ಪುತ್ರರಿಗೆ ಮೊದಲ ಮತದಾನದ ಪುಳಕ: ಕುಷ್ಟಗಿ ರಸ್ತೆಯ ಭಾಗ್ಯ ನಗರದ ನಿವಾಸಿ ಪರುಶುರಾಮ ಕಟವಟೆ ಅವರು ತಮ್ಮ ಮೂವರು ಪುತ್ರರೊಂದಿಗೆ ಟ್ರಿನಿಟಿ ಶಾಲೆಯ 136ನೇ ಮತಟಗಟ್ಟೆಯಲ್ಲಿ ಮತದಾನ ಮಾಡಿದರು. ಇದೇ ಮೊದಲ ಬಾರಿಗೆ ಮೂವರು ಪುತ್ರರಿಗೆ ಮತದಾನ ಮಾಡುವ ಭಾಗ್ಯ ಬಂದಿದ್ದು, ಅವರ ಜೊತೆ ತಂದೆಯೂ ಉತ್ಸಾಹದಿಂದ ಮತ ಚಲಾವಣೆ ಮಾಡಿ, ಬೆರಳಿಗೆ ಹಾಕಿದ ಶಾಹಿಯನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.