ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಶಿವರಾಜ ತಂಗಡಗಿ ಮಾತನಾಡಿದರು. ಶರಣಪ್ರಕಾಶ್ ಪಾಟೀಲ್, ಬಿ. ಝಡ್ ಜಮೀರ್ ಅಹಮದ್ ಖಾನ್, ಹಸನಸಾಬ್ ದೋಟಿಹಾಳ, ಬಿ.ನಾಗೇಂದ್ರ ಇದ್ದಾರೆ.
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು ಜುಲೈ 2ರಿಂದ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧರಿಸಿದೆ.
ಸಮಿತಿಯ ಅಧ್ಯಕ್ಷರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಸಚಿವರು ‘ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಟಿ.ಬಿ. ಬೋರ್ಡ್‌ನ ಕೆಲ ಅಧಿಕಾರಿಗಳು ಈ ಬಾರಿ ಒಂದು ಬೆಳೆಗೆ ಮಾತ್ರ ನೀರು ನೀಡಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ರೈತರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಈಗ ಒಂದು ಬೆಳೆಗೆ ಮಾತ್ರ ನೀರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಭೆಯಲ್ಲಿ ಎರಡನೇ ಬೆಳೆಗೆ ನೀರು ನೀಡುವ ಸಂಬಂಧ ಚರ್ಚಿಸಿ ನಿರ್ಧಾರಿಸಲಾಗುವುದು’ ಎಂದು ತಿಳಿಸಿದರು.
ಜುಲೈನಲ್ಲಿ ಸಭೆ: ‘ಅಣೆಕಟ್ಟೆ ಸುರಕ್ಷತೆ, ಬೆಳೆ ಸಂರಕ್ಷಣೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಶಾಸಕರು ಹಾಗೂ ರೈತರನ್ನು ಒಳಗೊಂಡಂತೆ ಸಭೆ ನಡೆಸಬೇಕು ಎಂದು ರೈತರು ಬೇಡಿಕೆ ಸಲ್ಲಿಸಿದ್ದಾರೆ. ಈ ವಿಚಾರವನ್ನು ಸಿ.ಎಂ. ಅವರ ಗಮನಕ್ಕೆ ತಂದು ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಸಭೆ ನಡೆಸಲು ದಿನಾಂಕ ನಿಗದಿ ಪಡಿಸಲಾಗುವುದು’ ಎಂದು ಹೇಳಿದರು.
‘ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಾವಣೆ ಮಾಡುವ ಬಗ್ಗೆಯೂ ಅವರೊಂದಿಗೆ ಚರ್ಚಿಸಲಾಗುವುದು. ಆಗಿನ ಸಭೆಯಲ್ಲಿ ಅಣೆಕಟ್ಟೆಯ ಸುರಕ್ಷತೆಯ ಪರಿಣಿತರು ಕೂಡ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ಸಚಿವರಾದ ಶರಣಪ್ರಕಾಶ್ ಪಾಟೀಲ್, ಬಿ. ಝಡ್ ಜಮೀರ್ ಅಹಮದ್ ಖಾನ್, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಶಾಸಕರಾದ ಬಿ.ನಾಗೇಂದ್ರ, ಕೆ.ರಾಘವೇಂದ್ರ ಹಿಟ್ನಾಳ, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಶಿವರಾಜ ಪಾಟೀಲ್, ಬಿ.ಎಂ.ನಾಗರಾಜ, ವಿಧಾಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಬಸವನಗೌಡ ತುರುವಿಹಾಳ, ರೈತ ಮುಖಂಡರು, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವಿಜಯನಗರ ಹೆಚ್ಚುವರಿ ಜಿಲ್ಲಾಧಿಕಾರಿ ಪಾಲ್ಗೊಂಡಿದ್ದರು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ: ಜು. 2ರಿಂದ 15ರ ತನಕ 2000 ಕ್ಯುಸೆಕ್ಸ್, 16ರಿಂದ 31ರ ತನಕ 3000 ಕ್ಯುಸೆಕ್ಸ್ ಮತ್ತು ಆ. 1ರಿಂದ ನ. 30ರ ವರೆಗೆ 4100 ಕ್ಯುಸೆಕ್ಸ್.
ಬಲದಂಡೆ ಮೇಲ್ಮಟ್ಟದ ಕಾಲುವೆ: ಜು.10ರಿಂದ 31ರವರೆಗೆ ಸರಾಸರಿ 700 ಕ್ಯುಸೆಕ್ಸ್, ಆ.1ರಿಂದ ನ. 30ರ ವರೆಗೆ 1300 ಕ್ಯುಸೆಕ್ಸ್.
ಬಲದಂಡೆಯ ಕೆಳಮಟ್ಟದ ಕಾಲುವೆ: ಜುಲೈ 10ರಿಂದ 31ರ ತನಕ ಸರಾಸರಿ 500 ಕ್ಯುಸೆಕ್ಸ್, ಆ. 1ರಿಂದ ನ. 30ರ ತನಕ 650 ಕ್ಯುಸೆಕ್ಸ್.
ರಾಯ ಬಸವಣ್ಣ ಕಾಲುವೆ: ಜೂನ್ 1ರಿಂದ ನೀರು ಹರಿಸಲಾಗಿದ್ದು ನ. 30ರ ತನಕ ಸರಾಸರಿ 220 ಕ್ಯುಸೆಕ್ಸ್.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ: ಜುಲೈ 1ರಿಂದ 25 ಕ್ಯುಸೆಕ್ಸ್‌ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ನದಿ ಪೂರಕ: ಸುಮಾರು 150 ಕ್ಯುಸೆಕ್ಸ್‌ನಂತೆ ನದಿ ಪೂರಕ ಕಾರ್ಖಾನೆಗಳು ಒಳಗೊಂಡಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.