ಯಲಬುರ್ಗಾ ತಾಲ್ಲೂಕು ಬಂಡಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನ ಕಟ್ಟಡ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆಯನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ನೆರವೇರಿಸಿದರು.
ಯಲಬುರ್ಗಾ: ತಾಲ್ಲೂಕಿನ ಬಂಡಿಹಾಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನ ನಿರ್ಮಾಣದ ಶಂಕುಸ್ಥಾಪನೆಯನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, ‘ಗ್ರಾಮದಲ್ಲಿ ₹4 ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ, ₹60 ಲಕ್ಷ ವೆಚ್ಚದಲ್ಲಿ ಸಮುದಾಯಭವನ ನಿರ್ಮಾಣಗೊಳ್ಳಲಿದೆ. ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರು ಕಾಳಜಿ ವಹಿಸಬೇಕು. ಹಾಗೆಯೇ ಗ್ರಾಮಸ್ಥರು ಕೂಡಾ ನಿಗಾವಹಿಸಿ ಉತ್ತಮ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ತಾಲ್ಲೂಕಿನಲ್ಲಿ ಮಾದರಿ ಕೌಶಲಾಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಇದೇ ವರ್ಷದಿಂದ ನರ್ಸಿಂಗ್ ಕಾಲೇಜು ಪ್ರಾರಂಭಗೊಳ್ಳಲಿದೆ’ ಎಂದರು.
‘ಕುಕನೂರು ಮತ್ತು ಯಲಬುರ್ಗಾ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳು, ಸಮುದಾಯ ಭವನ, ಹೆಚ್ಚುವರಿ ಶಾಲಾ ಕೊಠಡಿ, ಪಶು ಸಂಗೋಪನೆ ಕೇಂದ್ರಗಳು ಹಾಗೂ ಹೈಸ್ಕೂಲ್ ಮಂಜೂರಾತಿ ಮಾಡಿಸಿದ್ದರಿಂದ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ವೈದ್ಯಾಧಿಕಾರಿ ನೇತ್ರಾ ಹಿರೇಮಠ, ಅನಿಲ್ ಪಾಟೀಲ, ಗ್ಯಾರಂಟಿ ಸಮಿತಿಯ ಸುಧೀರ ಕೊರ್ಲಳ್ಳಿ, ವೀರನಗೌಡ ಪೊಲೀಸ್‍ಪಾಟೀಲ, ಶೇಖರಗೌಡ ಉಳ್ಳಾಗಡ್ಡಿ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ಈರಪ್ಪ ಕುಡಗುಂಟಿ, ಬಸವರಾಜ ನಿಡಗುಂದಿ, ಮಲ್ಲು ಜಕ್ಕಲಿ, ರಹಿಮಾನಸಾಬ ನಾಯಕ, ಪುನಿತ್ ಕೊಪ್ಪಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.