
ಯಲಬುರ್ಗಾ: ಕಳಬೇಡನ ಆರ್ಭಟ, ರಂಗು ರಂಗಿನ ಮೋಜಿನಾಟ, ರಂಜಿಸುವ ಅಣಕು ಶವಯಾತ್ರೆಗಳು, ಅಲಂಕೃತಗೊಂಡ ವಿವಿಧ ಕಾಮಣ್ಣರ ಆಕೃತಿಗಳು... ಹೀಗೆ ಹೋಳಿ ಹಬ್ಬದ ಪ್ರಯುಕ್ತ ಐದು ದಿನಗಳ ಕಾಲ ನಡೆಯುವ ರಂಜನೀಯ ಚಟುವಟಿಕೆಗಳು ನೋಡುಗರ ಕಣ್ಮನ ಸೆಳೆಯುತ್ತವೆ.
ಪಟ್ಟಣದಲ್ಲಿ ಹೋಳಿ ಹಬ್ಬಕ್ಕೆ ಶನಿವಾರ ಚಾಲನೆ ದೊರೆಕ್ಕಿದ್ದು, ಮಾ.4ರಂದು ಬೆಳಿಗ್ಗೆ ಕಾಮದಹನ ಹಾಗೂ ಮಧ್ಯಾಹ್ನ ಬಣ್ಣದೋಕಳಿಯೊಂದಿಗೆ ಮುಕ್ತಾಯಗೊಳ್ಳಲಿದೆ.
ಗಾಳಿಯರ ಕಾಮ, ಕಂಡೇರ ಕಾಮ, ದೈವದ ಕಾಮ ಹಾಗೂ ಸರ್ಕಾರಿ ಕಾಮ ಹೀಗೆ ನಾಲ್ಕು ಓಣಿಗಳಲ್ಲಿ ಕಾಮಣ್ಣ ಪ್ರತಿಷ್ಠಾನ ಸಮಿತಿಯವರು ನೆಲ್ಲು ಹುಲ್ಲಿನಿಂದ ಕಾಮಣ್ಣನ ಆಕೃತಿಯನ್ನು ಕೂಡಿಸಿರುತ್ತಾರೆ. ವಿವಿಧ ಬಟ್ಟೆ ಹಾಗೂ ಇನ್ನಿತರ ಆಭರಣಗಳಿಂದ ಶೃಂಗರಿಸುತ್ತಾರೆ.
3ನೇ ದಿನ ರತಿದೇವಿಯನ್ನು ಕೂಡಿಸಿ ವಿಶೇಷ ಪೂಜೆಯೊಂದಿಗೆ ವಿವಾಹಕಾರ್ಯ ನೆರವೇರಿಸಲಾಗುತ್ತದೆ. ನಂತರ ಮಗ ಭೀಮನನ್ನು ಕೂಡಿಸಲಾಗುತ್ತದೆ. ಕಾಮದಹನದ ಮುನ್ನಾ ದಿನ ನಡೆಯುವ ಕಳಬೇಡನ ಕುಣಿತ ಇಲ್ಲಿಯ ವಿಶೇಷತೆ.
ಸಂಜೆ ಗಾಳಿಯರ ಓಣಿಯ ಕಾಮಣ್ಣ ಸಮಿತಿಯವರು ಕಳಬೇಡನ ಕುಣಿತಕ್ಕೆ ಚಾಲನೆ ನೀಡುತ್ತಾರೆ. ನಂತರದಲ್ಲಿ ಕಂಡೇರ ಕಾಮಣ್ಣ ಸಮಿತಿ, ದೈವದ ಕಾಮಣ್ಣ ಕೊನೆಗೆ ಸರ್ಕಾರಿ ಕಾಮದವರು ಕಳಬೇಡನ ಕುಣಿತದ ಆಚರಣೆಗೆ ಮುಂದಾಗುತ್ತಾರೆ.
ಕಂಡೇರ ಕಾಮದವರು ಕಳಬೇಡನ ಕುಣಿತದ ಜೊತೆಗೆ ಅಣುಕು ಶವಯಾತ್ರೆ ಆಯೋಜಿಸುತ್ತಾರೆ. ಕಳಬೇಡನ ಕುಣಿತ ಹಾಗೂ ಬಣ್ಣದ ಓಕಳಿಯ ಬಂಡಿಯು ಪಟ್ಟಣದಲ್ಲಿ ಪ್ರತಿಷ್ಠಾನಗೊಂಡ ಕಾಮಣ್ಣ ಭೇಟಿ ಕೊಟ್ಟು ಮತ್ತೆ ಮೂಲ ಸ್ಥಳಕ್ಕೆ ಹಿಂತಿರುಗುತ್ತದೆ. ಇದು ಮುಕ್ತಾಗೊಳ್ಳುವಷ್ಟರಲ್ಲಿ ಬೆಳಗಾಗಿರುತ್ತದೆ.
ನಂತರ ಎಲ್ಲ ಕಾಮಣ್ಣರನ್ನು ಮೆರವಣಿಗೆಯ ಮೂಲಕ ರೇಣುಕಾಚಾರ್ಯ ವೃತ್ತದ ಬಳಿ ಉಸಿಗಿನ ಕಟ್ಟಿ ಪಕ್ಕದಲ್ಲಿ ದೈವದ ಕಾಮಣ್ಣನ ದಹನ ಮಾಡಲಾಗುತ್ತದೆ. ದಹನ ಕಾರ್ಯ ಶುರುವಾಗುತ್ತಿದ್ದಂತೆ ಮರಳಿ ತಮ್ಮ ತಮ್ಮ ನಿಗದಿತ ಸ್ಥಳಕ್ಕೆ ಬಂದು ವಿವಿಧ ವಿಧಾನಗಳನ್ನು ಅನುಸರಿಸಿ ಕಾಮದಹನ ನೆರವೇರಿಸಲಾಗುತ್ತದೆ.
ರೈತಾಪಿ ವರ್ಗದವರು ಹಾಗೂ ಇತರರು ಕಾಮಣ್ಣನ ಬೆಂಕಿ ತಂದು ಕಡಲೆಯನ್ನು ಹುರಿದುಕೊಂಡು ತಿನ್ನುವುದು ರೂಢಿ. ನಂತರ ಬಣ್ಣದೋಕಳಿ ಯುವಕರಿಂದ ಭರ್ಜರಿಯಾಗಿ ನೆಡೆಯುತ್ತದೆ. ಕ್ರಮೇಣ ಮುಕ್ತಾಯಗೊಂಡು ಹೋಳಿ ಹಬ್ಬಕ್ಕೆ ತೆರೆ ಬೀಳುತ್ತದೆ.
ಸರ್ಕಾರಿ ಕಾಮಣ್ಣ ಸಮಿತಿಯವರು ವಿಶಾಲವಾದ ಜಾಗದಲ್ಲಿ ವಿವಿಧ ಆಕೃತಿಗಳನ್ನು ನಿರ್ಮಿಸಿ ಹೆಚ್ಚು ಆಕರ್ಷಣೀಯವಾಗಿ ಅಲಂಕರಿಸುತ್ತಾರೆ. ಗೊಂಬೆಗಳ ನಿರ್ಮಾಣ ಕಾರಂಜಿಗಳು ರಾತ್ರಿಯ ಸಮಯದಲ್ಲಿ ನೋಡುಗರ ಕಣ್ಮನ ಸೆಳೆಯುತ್ತವೆ.ಷಣ್ಮುಖಪ್ಪ ರಾಂಪೂರ ಸ್ಥಳೀಯ ಮುಖಂಡ
ಸುಮಾರು ವರ್ಷಗಳಿಂದ ಆಯೋಜನೆಗೊಳ್ಳುವ ಕಂಡೇರ ಕಾಮಣ್ಣ ಸಮಿತಿಯವರ ಅಣಕು ಶವಯಾತ್ರೆಯು ವಿಶೇಷ ಆಕರ್ಷಣೆಯಾಗಿ ಅನಾವರಣಗೊಳ್ಳುತ್ತಿದೆ. ಸುಮಾರು ಮೂನ್ನಾಲ್ಕು ಗಂಟೆಗಳ ಕಾಲ ಪಾತ್ರದಾರಿಗಳು ಪ್ರೇಕ್ಷಕರನ್ನು ರಂಜಿಸುತ್ತಾರೆ.ವಿ.ಎಸ್. ಶಿವಪ್ಪಯ್ಯನಮಠ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.