ADVERTISEMENT

ಶ್ರೀರಂಗಪಟ್ಟಣ ದಸರಾ: ₹ 2 ಕೋಟಿ ಬೇಡಿಕೆ

ಈ ಬಾರಿಯೂ ಸರಳ ಆಚರಣೆ ಸಾಧ್ಯತೆ, ನಿರ್ಬಂಧ ಕೊಂಚ ಸಡಿಲಿಕೆ ಮಾಡಿ ಉತ್ಸವ ಆಯೋಜನೆ

ಎಂ.ಎನ್.ಯೋಗೇಶ್‌
Published 15 ಸೆಪ್ಟೆಂಬರ್ 2021, 12:54 IST
Last Updated 15 ಸೆಪ್ಟೆಂಬರ್ 2021, 12:54 IST
ಕಳೆದ ವರ್ಷದ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ
ಕಳೆದ ವರ್ಷದ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ   

ಮಂಡ್ಯ: ಮೈಸೂರು ದಸರಾಕ್ಕೂ ಪುರಾತನವಾದ ಶ್ರೀರಂಗಪಟ್ಟಣ ದಸರಾ ಉತ್ಸವ ಈ ಬಾರಿಯೂ ಸರಳವಾಗಿ ನಡೆಯುವ ಸಾಧ್ಯತೆ ಇದೆ. ಆದರೆ ಪೂಜೆ, ಪುನಸ್ಕಾರ, ದೀಪಾಲಂಕಾರ, ಕಲಾ ಚಟುವಟಿಕೆಗಳನ್ನು ವೈಭವದಿಂದ ಆಯೋಜಿಸುವ ಚಿಂತನೆ ನಡೆದಿದ್ದು ₹ 2 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಕಳೆದ ವರ್ಷ ಕೋವಿಡ್‌ ಭೀತಿ ಇದ್ದ ಕಾರಣ 1 ದಿನ ಮಾತ್ರ ಸರಳವಾಗಿ ದಸರಾ ಆಚರಿಸಲಾಯಿತು. ಪ್ರವಾಸಿಗರು ಹಾಗೂ ಸಾರ್ವಜನಿಕರು ಭಾಗವಹಿಸಲು ನಿರ್ಬಂಧ ಹೇರಲಾಗಿತ್ತು. ಬತ್ತೇರಿ ಮೇಲ್ಭಾಗದಲ್ಲಿ ವೇದಿಕೆ ನಿರ್ಮಾಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಟ್ಟಣದಾದ್ಯಂತ ಎಲ್‌ಇಡಿ ಪರದೆ ಅಳವಡಿಸಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

ಈ ಬಾರಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಕಾರಣ ನಿರ್ಬಂಧಗಳನ್ನು ಕೊಂಚ ಸಡಿಲಿಸಿ ಸ್ಥಳೀಯರಿಗೆ, ಕಡಿಮೆ ಸಂಖ್ಯೆಯ ಪ್ರವಾಸಿಗರಿಗೆ ಅವಕಾಶ ನೀಡಿ ದಸರಾ ಆಚರಣೆ ಮಾಡುವ ಚಿಂತನೆ ಅಧಿಕಾರಿಗಳಿಗೆ ಇದೆ. ಈ ಕುರಿತಂತೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಜೊತೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ADVERTISEMENT

ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಭಾಗವಹಿಸಿದ್ದರು. ಮೈಸೂರು ದಸರಾ ಕೂಡ ಸರಳವಾಗಿ ನಡೆಯಲಿದ್ದು ಉತ್ಸವ ನಡೆಸಲು ₹ 6 ಕೋಟಿ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಕಳೆದ ಬಾರಿ ₹ 5 ಕೋಟಿ ಅನುದಾನ ನೀಡಲಾಗಿತ್ತು, ಈ ಬಾರಿ ₹ 1 ಕೋಟಿ ಹೆಚ್ಚಳ ಮಾಡಲಾಗಿದೆ. ಶ್ರೀರಂಗಪಟ್ಟಣ ದಸರಾಕ್ಕೆ ಕಳೆದ ಬಾರಿ ₹ 50 ಲಕ್ಷ ಅನುದಾನ ನೀಡಲಾಗಿತ್ತು. ಈ ಬಾರಿ ₹ 2 ಕೋಟಿ ಅನುದಾನ ನೀಡಬೇಕು ಎಂದು ಶಾಸಕ ರವಿಂದ್ರ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ.

‘ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿರುವ ಕಾರಣ ನಿರ್ಬಂಧವನ್ನು ಸಡಿಲಿಸಿ ದಸರಾ ಆಚರಿಸುವ ಚಿಂತನೆ ನಡೆದಿದೆ. ಶಾಸಕರು ₹ 2 ಕೋಟಿ ಅನುದಾನ ಕೇಳಿದ್ದಾರೆ. ಕನಿಷ್ಠ ₹ 1 ಕೋಟಿಯಾದರೂ ಸಿಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಮೂರು ದಿನ ನಡೆಯುತ್ತದೆ. ಕಿರಂಗೂರು ಬನ್ನಿ ಮಂಟಪದಿಂದ ಚಾಮುಂಡೇಶ್ವರಿ ಮೂರ್ತಿಯನ್ನು ಅಂಬಾರಿಯ ಮೇಲೆ ಪ್ರತಿಷ್ಠಾಪಿಸಿ ಜಂಬೂಸವಾರಿ ನಡೆಸಲಾಗುತ್ತದೆ. ರಂಗನಾಥಸ್ವಾಮಿ ದೇವಾಲಯದ ಮುಂದಿನ ಆವರಣದಲ್ಲಿ 2 ದಿನ ವೈಭವದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಕೋವಿಡ್‌ನಿಂದ ಕಳೆದ ಬಾರಿ ಸ್ಥಳೀಯ ಕಲಾವಿದರಿಗೆ ಅವಕಾಶ ಸಿಕ್ಕಿಲ್ಲ. ಈ ಬಾರಿಯಾದರೂ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ಕಳೆದ ವರ್ಷ ದೊಡ್ಡ ಸ್ಟಾರ್‌ ಕಲಾವಿದರಿಗೆ ಮಾತ್ರ ಅವಕಾಶ ಕಲ್ಪಿಸಿ ಸ್ಥಳೀಯ ಕಲಾವದರನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಕಲಾವಿದರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದು ಈ ಬಾರಿಯಾದರೂ ಶ್ರೀರಂಗಪಟ್ಟಣ ದಸರಾದಲ್ಲಿ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಜನಪದ ಕಲಾವಿದ ಸ್ವಾಮಿ ಒತ್ತಾಯಿಸಿದರು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಕಳೆದೊಂದು ವಾರದಿಂದ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡುತ್ತಿರುವ ಕಲಾವಿದರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ರಂಗನಾಥ ಸ್ವಾಮಿ ದೇವಾಲಯ ಪ್ರವೇಶಕ್ಕೆ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ನಿರ್ಬಂಧಿಸಲಾಗಿದೆ. ಅದನ್ನು ಬಿಟ್ಟು ಮಿಕ್ಕೆಲ್ಲಾ ಪ್ರವಾಸಿ ತಾಣಗಳಲ್ಲಿ ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಬೆಂಗಳೂರು, ಮೈಸೂರು ಭಾಗದಿಂದ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಸೆ.18ರಂದು ಸಭೆ

ಶ್ರೀರಂಗಪಟ್ಟಣ ದಸರಾ ಆಚರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಸೆ.18ರಂದು ಶ್ರೀರಂಗಪಟ್ಟಣದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಸೇರಿ ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

‘ಸಭೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರನ್ನು ಕೋರಲಾಗಿದೆ. ಸಭೆಯಲ್ಲಿ ದಸರಾ ಆಚರಣೆ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.