ADVERTISEMENT

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ದೇವರ ಪುರಾತನ ವಿಗ್ರಹಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:49 IST
Last Updated 9 ಡಿಸೆಂಬರ್ 2025, 2:49 IST
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಬಳಿ, ಕಾವೇರಿ ನದಿಯಲ್ಲಿ ಸೋಮವಾರ ಪತ್ತೆಯಾಗಿರುವ ವೀರಭದ್ರೇಶ್ವರ ದೇವರ ವಿಗ್ರಹ
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಬಳಿ, ಕಾವೇರಿ ನದಿಯಲ್ಲಿ ಸೋಮವಾರ ಪತ್ತೆಯಾಗಿರುವ ವೀರಭದ್ರೇಶ್ವರ ದೇವರ ವಿಗ್ರಹ   

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಸಮೀಪ, ಕಾವೇರಿ ನದಿಯಲ್ಲಿ ಸೋಮವಾರ ನಾಲ್ಕು ದೇವರ ಪುರಾತನ ಶಿಲಾ ವಿಗ್ರಹಗಳು ಪತ್ತೆಯಾಗಿವೆ.

ಗ್ರಾಮಕ್ಕೆ ಅನತಿ ದೂರದಲ್ಲಿರುವ, ಕಿರು ಜಲ ವಿದ್ಯುತ್‌ ಘಟಕದ ಸಮೀಪ ನೀರಿನಲ್ಲಿ ವೀರಭದ್ರೇಶ್ವರ, ಕಾಳಿಕಾದೇವಿ, ಗಣೇಶ ಮತ್ತು ನಂದಿ ವಿಗ್ರಹಗಳು ಕಂಡು ಬಂದಿವೆ. ಗ್ರಾಮದ ಸಂತೋಷ್‌ ಇತರರ ಕಣ್ಣಿಗೆ ಈ ವಿಗ್ರಹಗಳು ಗೋಚರವಾಗಿದ್ದು, ನದಿಯ ದಡಕ್ಕೆ ತಂದು ಇರಿಸಿದ್ದಾರೆ. ಕಾಳಿಕಾ ದೇವಿಯ ವಿಗ್ರಹ ಹೆಚ್ಚು ಭಾರ ಇರುವುದರಿಂದ ಅದನ್ನು ನದಿಯಲ್ಲೇ ಬಿಟ್ಟಿದ್ದಾರೆ.

‘ಈ ವಿಗ್ರಹಗಳನ್ನು ಗ್ರಾನೈಟ್‌ ಶಿಲೆಯಲ್ಲಿ ಕಡೆಯಲಾಗಿದೆ. ಹಲವು ವರ್ಷಗಳಿಂದ ಇವು ನೀರಿನಲ್ಲಿ ಮುಳುಗಿರುವುದರಿಂದ ಪಾಚಿ ಮೆತ್ತಿಕೊಂಡಿದೆ. ಈ ವಿಗ್ರಹಗಳನ್ನು ನದಿಯಲ್ಲಿ ಯಾರು ಇಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಿಗ್ರಹಗಳು ಸಿಕ್ಕಿರುವ ಸ್ಥಳದ ಆಸುಪಾಸಿನಲ್ಲಿ ಯಾವುದೇ ಪುರಾತನ ದೇವಾಲಯಗಳೂ ಇಲ್ಲ. ಈ ಅಪರೂಪದ ಶಿಲ್ಪಗಳ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಕ್ರಮ ವಹಿಸಬೇಕು’ ಎಂದು ಗ್ರಾಮದ ಮುಖಂಡ ಗಿರೀಶ್ ಒತ್ತಾಯಿಸಿದ್ದಾರೆ.

ADVERTISEMENT

‘ದೊಡ್ಡಪಾಳ್ಯ ಗ್ರಾಮದ ಬಳಿ, ಕಾವೇರಿ ನದಿಯಲ್ಲಿ ವಿವಿಧ ದೇವರ ನಾಲ್ಕು ವಿಗ್ರಹಗಳು ಸಿಕ್ಕಿರುವ ಮಾಹಿತಿ ಈಗಷ್ಟೇ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಅವುಗಳನ್ನು ಪಟ್ಟಣದ ಚಾಮರಾಜೇಂದ್ರ ವಸ್ತುಸಂಗ್ರಹಾಲಯಕ್ಕೆ ತಂದು ಸಂರಕ್ಷಣೆ ಮಾಡಲಾಗುವುದು’ ಎಂದು ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್ ಎನ್‌.ಎನ್‌. ಗೌಡ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಬಳಿ ಕಾವೇರಿ ನದಿಯಲ್ಲಿ ಸಿಕ್ಕಿರುವ ಗಣೇಶ ಮತ್ತು ನಂದಿ ವಿಗ್ರಹಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.