ADVERTISEMENT

ಬೇಬಿಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಬಂದ್

ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 2:33 IST
Last Updated 26 ಜನವರಿ 2021, 2:33 IST
ಎಸಿ ಬಿ.ಸಿ.ಶಿವಾನಂದಮೂರ್ತಿ
ಎಸಿ ಬಿ.ಸಿ.ಶಿವಾನಂದಮೂರ್ತಿ   

ಪ್ರಜಾವಾಣಿ ವಾರ್ತೆ
ಪಾಂಡವಪುರ:
ತಾಲ್ಲೂಕಿನ ಬೇಬಿಬೆಟ್ಟದ ಸುತ್ತ ಕೈಕುಳಿ ಸೇರಿದಂತೆ ಎಲ್ಲಾ ರೀತಿಯ ಕಲ್ಲುಗಣಿಗಾರಿಕೆ, ಕ್ರಷರ್‌ಗಳನ್ನು ಸೋಮವಾರದಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.

ಪಟ್ಟಣ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಹಿಂದೆಯೂ ಬೇಬಿಬೆಟ್ಟದಲ್ಲಿ ಅಕ್ರಮಗಣಿಗಾರಿಕೆ ವಿರುದ್ಧ ಕ್ರಮವಹಿಸಲಾಗಿದೆ. ಆದರೆ ಕೆಲವು ಆಡಳಿತದ ಕಣ್ತಪ್ಪಿಸಿ ಅಕ್ರಮಗಣಿಗಾರಿಕೆ ನಡೆಸುತ್ತಿದ್ದರು. ಶಿವಮೊಗ್ಗ ಘಟನೆಯ ಹಿನ್ನೆಲೆಯಲ್ಲಿ ಕೆಆ‌ರ್‌ಎಸ್ ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಗಣಿಗಾರಿಕೆ ಸಂಪೂ‌‌ರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.

ಬೇಬಿಬೆಟ್ಟದ ಪ್ರದೇಶದ ವ್ಯಾಪ್ತಿಯಲ್ಲಿ ಸಿ ಫಾರಂ ಹೊಂದಿರುವ 21 ಕ್ರಷರ್‌ಗಳಿವೆ. ಈ ಪೈಕಿ ಕೇವಲ ಒಂದೇ ಒಂದು ಕ್ರಷರ್ ಮಾಲೀಕರಿಗೆ ಗಣಿಗಾರಿಕೆ ಗುತ್ತಿಗೆ ನೀಡಲಾಗಿದೆ. ಉಳಿದ 20 ಕ್ರಷರ್ ಮಾಲೀಕರಿಗೆ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಇಲ್ಲ. ಹೀಗಾಗಿ ಸಿ ಫಾರಂ ಹೊಂದಿರುವ ಕ್ರಷರ್ ಮಾಲೀಕರಿಗೂ ಕ್ರಷರ್ ನಡೆಸಲು ಅವಕಾಶವಿಲ್ಲ. ಬೇಬಿಬೆಟ್ಟದಲ್ಲಿ ಕಲ್ಲುಗಣಿಗಾರಿಕೆಯ ಸ್ಫೋಟವನ್ನು ನಿಷೇಧಿಸಲಾಗಿ‌ದ್ದರೂ ಈ ಕ್ರಷರ್ ಮಾಲೀಕರು ತಮ್ಮ ಕಲ್ಲುಪುಡಿ ಘಟಕಕ್ಕೆ ಕಚ್ಚಾ ಕಲ್ಲು ಎಲ್ಲಿಂದ ಪೂರೈಕೆಯಾಗುತ್ತಿತ್ತು ಎಂಬುದಕ್ಕೆ ದಾಖಲೆ ಒದಗಿಸಬೇಕಿದೆ ಎಂದರು.

ADVERTISEMENT

ಕಲ್ಲು ಗಣಿಗಾರಿಕೆಗೆ ಪೂರೈಕೆಯಾಗುತ್ತಿರುವ ಸ್ಫೋಟಕಗಳ ಬಗ್ಗೆ ನಿಗಾವಹಿಸಲಾಗಿದ್ದು, ಕಲ್ಲು ಸ್ಫೋಟಿಸಲು ಜಿಲೆಟಿನ್, ಡೈನಾಮೈಟ್‌ಗಳು ಎಲ್ಲಿಂದ ಆಮದಾಗುತ್ತಿತ್ತು. ಅವುಗಳ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಗಣಿಮಾಲೀಕರು ಮಾಹಿತಿ ನೀಡಬೇಕಿತ್ತು. ಇದನ್ನು ಅವರು ಪಾಲಿಸುತ್ತಿರಲಿಲ್ಲ ಎಂದು ಹೇಳಿದರು.

ಕಳೆದ ಮೂರು ದಿನಗಳ ಹಿಂದೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 7 ಹಿಟಾಚಿ ಮತ್ತು 4 ಟಿಪ್ಪರ್‌ಗಳನ್ನು ವಶಕ್ಕೆ ಪಡೆದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅವುಗಳನ್ನು ಪೊಲೀಸರಿಗೆ ಒಪ್ಪಿಸಿ ಪಿಸಿಆರ್ ಪ್ರಕರಣ ದಾಖಲಿಸಿದ್ದನ್ನು ಪ್ರಸ್ತಾಪಿಸಿದ ಎಸಿ ಶಿವಾನಂದಮೂರ್ತಿ ಅವರು, ಇಷ್ಟು ದಿನ ಏನು ಕೆಲಸ ಮಾಡುತ್ತಿದ್ದೀರಿ? ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ‌ ಬರೆದರೆ ನಿಮ್ಮ ತಲೆದಂಡವಾಗುತ್ತದೆ. ಗಣಿಗಾರಿಕೆ ವಿಚಾರದಲ್ಲಿ ಎಚ್ಚರದಿಂದ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.

ನಿಷೇಧದ ನಡುವೆಯೂ ಅಕ್ರಮ ಗಣಿಗಾರಿಕೆ ನಡೆಸುವುದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಿ ಎಂದು ಮನವಿ ಮಾಡಿದರು.

ತಹಶೀಲ್ದಾರ್–7022386583, ಪೊಲೀಸ್ ಇನ್ಸ್‌ಪೆಕ್ಟರ್–9480804858, ಗಣಿ ಅಧಿಕಾರಿ–7892520644 ಅಥವಾ ತಾಲ್ಲೂಕು ಕಚೇರಿಯ ಲ್ಯಾಂಡ್‌ಲೈನ್ –08236–255128.
ತಹಶೀಲ್ದಾರ್ ಪ್ರಮೋದ್ ಎಲ್ ಪಾಟೀಲ್, ಸಿಪಿಐ ಕೆ.ಪ್ರಭಾಕರ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.