
ಮಂಡ್ಯ: ಫೆ.20ರಂದು ಹೆಲಿ ಟೂರಿಸಂ ಅನ್ನು ಆಯೋಜಿಸಲಾಗಿದ್ದು ಸರ್ಕಾರಿ ಶಾಲೆ ಮತ್ತು ಕಾಲೇಜಿನ 10 ವಿದ್ಯಾರ್ಥಿಗಳಿಗೆ ಹಾಗೂ 5 ಪ್ರಗತಿಪರ ರೈತರಿಗೆ ಉಚಿತ ಹೆಲಿಕಾಪ್ಟರ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.
ಬೂದನೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೂದನೂರು ಒಂದು ಐತಿಹಾಸಿಕ ಕ್ಷೇತ್ರವಾಗಿದ್ದು 15ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಹಳೆಯ ಬೂದನೂರುನಲ್ಲಿ ವಾಸ್ತುಶಿಲ್ಪಗಳು ಕುರುಹುಗಳು ಮತ್ತು ಹಲವು ಶಾಸನಗಳು ದೊರಕಿವೆ ಎಂದು ತಿಳಿಸಿದರು.
ಬೂದನೂರಿನಲ್ಲಿ ದಕ್ಷಿಣ ಭಾರತದ ಎರಡನೇ ದೇವಸ್ಥಾನವಾಗಿ ಅನಂತಪದ್ಮನಾಭ ದೇವಸ್ಥಾನ ಪ್ರಸಿದ್ಧಿಯನ್ನು ಪಡೆದಿದ್ದು ಕಾಶಿ ವಿಶ್ವನಾಥ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು.
ಫೆ.21ರಂದು ಬೂದನೂರಿನ ಉತ್ಸವವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯಲ್ಲಿ ಬೂದನೂರು ಉತ್ಸವವನ್ನು 2ನೇ ಬಾರಿ ಮಾಡುತ್ತಿದ್ದು, ಫೆ. 21 ಮತ್ತು 22ರಂದು ಉತ್ಸವ ನಡೆಯಲಿದೆ ಎಂದು ತಿಳಿಸಿದರು.
ಫೆ.17ರಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದ್ದು, ಆಕಾಂಕ್ಷಿಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜಯಶಾಲಿಯಾದವರಿಗೆ ವಿಶೇಷ ಬಹುಮಾನಗಳನ್ನು ವಿತರಿಸಬೇಕು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೂ ಸಮಾಧಾನಕರ ಬಹುಮಾನವನ್ನು ವಿತರಿಸುವಂತೆ ಸೂಚಿಸಿದರು.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ:
ಫೆ.18 ಮತ್ತು 19ರಂದು ಕಸಬಾ ಹೋಬಳಿಯ 30 ಗ್ರಾಮಗಳಿಗೆ ಎಲ್ಲ ಮಹಿಳೆಯರಿಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ‘ಮನೆಗೊಂದು ರಂಗೋಲಿ ಮನೆಗೊಂದು ಗ್ಯಾರಂಟಿ’ ಎನ್ನುವ ನಿಟ್ಟಿನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಿಸಬೇಕು ಎಂದು ತಿಳಿಸಿದರು.
ಫೆ.18ರಂದು ಕ್ರೀಡಾ ಇಲಾಖೆ ವತಿಯಿಂದ ಹಗ್ಗ ಜಗ್ಗಾಟ, ಲೆಮನ್ ಆ್ಯಂಡ್ ಸ್ಪೋನ್, ಕಬಡ್ಡಿ, ಕೊಕ್ಕೊ ವಿವಿಧ ರೀತಿಯ 10 ಕ್ರೀಡೆಗಳನ್ನು ವಿಶ್ವಮಾನವ ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
‘ಜಿಲ್ಲಾ ಬೂದನೂರು ಉತ್ಸವವು ಪ್ರವಾಸಿಗರ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮಾಡಲಾಗಿದ್ದು ಸಾರ್ವಜನಿಕರು ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು.ದೇಶ -ವಿದೇಶ ಪ್ರವಾಸಿಗರಿಗೆ ಬೂದನೂರು ದೇವಸ್ಥಾನದ ಇತಿಹಾಸ ಮತ್ತು ಮೆರುಗನ್ನು ಪಸರಿಸವಂತೆ ಪ್ರಚಾರ ಮಾಡಬೇಕು’ ಎಂದು ಹೇಳಿದರು.
‘ಜಿಲ್ಲೆಗೆ ₹25 ಕೋಟಿ ಬಿಡುಗಡೆ ಮಾಡಿ ಜಿಲ್ಲಾ ಚಿತ್ರಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಮಂಡ್ಯ ಜಿಲ್ಲೆಯ ಬೂದನೂರು ಗ್ರಾಮಕ್ಕೆ ₹10 ಕೋಟಿ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.
ಬೂದನೂರು ಉತ್ಸವದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಬೇಕು ಹಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ಉತ್ಸವವನ್ನು ಮಾಡುತ್ತಿರುವುದು ಜಿಲ್ಲೆಗೆ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಮತ್ತು ಉಪವಿಭಾಗಾಧಿಕಾರಿ ಶಿವಮೂರ್ತಿ ಇದ್ದರು.
‘ವರದಿ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ’
ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ‘ಕೆಮಿಕಲ್ ಕಾರ್ಖಾನೆ’ಯಲ್ಲಿ ನಡೆದ ದುರಂತ ನಡೆದ ಸ್ಥಳಕ್ಕೆ ಶಾಸಕ ಪಿ. ರವಿಕುಮಾರ್ ಗಣಿಗ ಭೇಟಿ ನೀಡಿ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು ‘ಅಧಿಕಾರಿಗಳು ತನಿಖೆ ಮಾಡಿ ವರದಿ ಕೊಡುತ್ತಾರೆ. ಆ ವರದಿ ಬಂದ ಬಳಿಕ ಕ್ರಮ ವಹಿಸಲಾಗುವುದು. ಪ್ರಕರಣದಲ್ಲಿ ಮಾಲೀಕರ ಲೋಪ ಎದ್ದು ಕಾಣುತ್ತಿದೆ. ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮೃತ ಯುವಕರ ವಿಳಾಸ ಪತ್ತೆ ಹಚ್ಚುವ ಕಾರ್ಯ ಆಗುತ್ತಿದ್ದು ನಂತರ ಅವರ ಊರಿಗೆ ಮೃತ ದೇಹ ರವಾನೆ ಮಾಡಲಾಗುವುದು’ ಎಂದರು.
‘ಈ ಹಿಂದೆ ರಾಸಾಯನಿಕ ಸೋರಿಕೆಯಾಗಿ ರೈತರ ಜಮೀನಿಗೆ ಹೋಗಿತ್ತು. ಕೆಲವು ಜನರು ಅಸ್ವಸ್ಥರಾಗಿದ್ದರು. ಕಾರ್ಖಾನೆ ವಿರುದ್ಧ ಹೋರಾಟ ಮಾಡಿದ್ದರು. ನಾನು ಕೂಡ ಬೆಂಬಲ ಕೊಟ್ಟಿದ್ದೆ. ಅದರಂತೆ ಕಾರ್ಖಾನೆ ಕೂಡ ಮುಚ್ಚಿಸಿದ್ದೆವು’ ಎಂದರು.
ರಾಜೇಶ್ ಕೃಷ್ಣನ್ ‘ಸಂಗೀತ ಸಂಜೆ’
ಫೆ.20ರಂದು ಹೊಸ ಬೂದನೂರಿನ ದೇವಸ್ಥಾನದ ಆವರಣದಲ್ಲಿ ಆಹಾರ ಮೇಳ ಮತ್ತು ಸಂಜೆ ಅಗ್ನಿಶಾಮಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಮತ್ತು ಬೂದನೂರು ಉತ್ಸವವನ್ನು ಹಳೆ ಬೂದನೂರುನಿಂದ ಮೆರವಣಿಗೆ ಮಾಡಲಾಗುತ್ತದೆ ಎಲ್ಲಾ ಗ್ರಾಮದ ಗ್ರಾಮಸ್ಥರು ಉತ್ಸವಕ್ಕೆ ಮೆರುಗು ತರುವಂತೆ ಕಾರ್ಯನಿವಹಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.
ಫೆ.21ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗುರುಕಿರಣ್ ಅವರ ತಂಡದಿಂದ ಮತ್ತು ಫೆ.22ರಂದು ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ ರಾಜೇಶ್ ಕೃಷ್ಣನ್ ಅವರ ತಂಡ ಮತ್ತು ಅಲೋಕ್ ಆರ್. ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.