ನಾಗಮಂಗಲ: ಪಟ್ಟಣದ ಕಾವೇರಿ ಬೇಕರಿ ಆ್ಯಂಡ್ ಜ್ಯೂಸ್ ಸೆಂಟರ್‌ನಿಂದ ಖರೀದಿಸಿದ್ದ ಐಸ್ ಕೇಕ್ ತಿಂದ ಮಗು ಅಸ್ವಸ್ಥಗೊಂಡಿದ್ದು, ಪುರಸಭೆಯ ಅಧಿಕಾರಿಗಳು ಭೇಟಿ ನೀಡಿ ಬೇಕರಿಯ ಮಾಲೀಕರಿಗೆ ನೋಟಿಸ್ ನೀಡಿ ಬೇಕರಿಗೆ ಬೀಗ ಹಾಕಿದ್ದಾರೆ.
ಭಾನುವಾರ ಪಟ್ಟಣದ ಮೇಗಲಕೇರಿ ನಿವಾಸಿ ಆನಂದ್ ಅವರು ಕೇಕ್ ತಂದು ತಿನಿಸಿದ ಕೆಲವೇ ನಿಮಿಷಗಳಲ್ಲಿ ಮಗು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಆಹಾರದಲ್ಲಿ ವ್ಯತ್ಯಾಸವಾಗಿದೆ ಎಂದು ತಿಳಿಸಿದರು.
ಬಳಿಕ ಆನಂದ್ ಮನೆಗೆ ತೆರಳಿ ಕೇಕ್ ಪರಿಶೀಲಿಸಿದಾಗ ಅದರಲ್ಲಿ ಹುಳುಗಳಿದ್ದು, ಕೊಳತ ವಾಸನೆ ಬಂದಿದೆ. ನಂತರ ಬೇಕರಿಗೆ ಬಂದ ಆನಂದ್ ಬೇಕರಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡು ಬೇಕರಿಗೆ ಒಳಗೆ ಹೋಗಿ ಪರಿಶೀಲಿಸಿದಾಗ ಅಶುಚಿತ್ವ ಮತ್ತು ಕೆಟ್ಟುಹೋದ ಆಹಾರ ಪದಾರ್ಥಗಳು ಮತ್ತು ರಾಸಾಯನಿಕ ಬಣ್ಣಗಳು, ಅವಧಿ ಮೀರಿದ ಕೇಕ್ ಮತ್ತು ತಿನಿಸಿಗಳು, ಗಬ್ಬೆದ್ದು ನಾರುತ್ತಿದ್ದ ವಸ್ತುಗಳಿರುವುದು ಗಮನಕ್ಕೆ ಬಂದಿದೆ.
‘ತಿನಿಸುಗಳನ್ನು ತಯಾರಿಸುವ ಸ್ಥಳವನ್ನು ನೋಡಿದರೆ ಜನರು ಬೆಚ್ಚಿ ಬೀಳುತ್ತಾರೆ. ಕೇಕ್ ತಯಾರಿಸುವ ವಸ್ತುಗಳು ಕೆಟ್ಟು ನಿಂತಿದ್ದು, ಬಣ್ಣಗಳು ಮತ್ತು ತ್ಯಾಜ್ಯಗಳು ಎಲ್ಲಂದರಲ್ಲಿ ಬಿದ್ದಿದ್ದವು. ಜನರು ಹೊರಗಿನಿಂದ ಬೇಕರಿಯ ಅಲಂಕಾರ ನೋಡಿ ಮಾರುಹೋಗಬೇಡಿ. ತಿನಿಸುಗಳನ್ನು ಖರೀದಿಸುವಾಗ ಎಚ್ಚರವಹಿಸಬೇಕು. ಇಂತಹ ಬೇಕರಿಗಳ ಪರವಾನಗಿಯನ್ನು ಪುರಸಭೆ ಅಧಿಕಾರಿಗಳು ರದ್ದುಪಡಿಸಬೇಕು’ ಎಂದು ದೂರುದಾರ ಆನಂದ್ ಆಗ್ರಹಿಸಿದರು.
ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ‘ಬೇಕರಿಯಲ್ಲಿ ಆಹಾರ ಪದಾರ್ಥಗಳು ಅವಧಿ ಮೀರಿರುವ ಮತ್ತು ಕೆಟ್ಟುಹೋದ ಆಹಾರ ಪದಾರ್ಥಗಳು ಕಂಡುಬಂದಿವೆ. ಸಿಹಿತಿನಿಸು ತಯಾರಿಸುವ ಪಾಕ ಸೇರಿದಂತೆ ವಿವಿಧ ತಿನಿಸುಗಳಲ್ಲಿ ಹುಳುಗಳು ಬಂದಿರುವುದು ಕಂಡಬಂದಿದ್ದರಿಂದ ಬೇಕರಿಗೆ ಬೀಗ ಹಾಕಿದ್ದು, ಕೇಕ್ ಅನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವರದಿಯ ನಂತರ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದರು.
ಪರಿಶೀಲನೆ ವೇಳೆ ಹಿರಿಯ ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ನಿಂಗೇಗೌಡ, ಮಹೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.