ಕೆ.ಆರ್.ಪೇಟೆ: ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಫಸ್ಟ್ ಕ್ರೈ ಇಂಟಲಿಟಾಟ್ಸ್ ಶಾಲೆಯಲ್ಲಿ ತಾಲ್ಲೂಕಿನ ಆರು ವರ್ಷದೊಳಗಿನ ಪುಟಾಣಿ ಮಕ್ಕಳಿಗೆ ಬಾಲ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪುಟಾಣಿ ಮಕ್ಕಳು ಲವಲವಕೆಯಿಂದ ಭಾಗವಹಿಸಿ ಶ್ಲೋಕ ಹೇಳಿದರಲ್ಲದೆ,ಜಾನಪದ ಮತ್ತು ಭಕ್ತಿ ಗೀತೆಗಳನ್ನು ತಮ್ಮ ತೊದಲ ಭಾಷೆಯಲ್ಲಿ ಮಧುರವಾಗಿ ಹಾಡಿದರು.
ಅಜ್ಜಿಯರು ಹೇಳೀದ ಕಥೆ ಹೇಳಿದರಲ್ಲದೆ ಕ್ಲೇ ಮಾಡೆಲ್‌ಗಳ ತಯಾರಿ ಚಿತ್ರಕಲೆ ಬರೆಯುವದರಲ್ಲಿ ತಮ್ಮ ಜ್ಞಾನ ಪ್ರದರ್ಶಿಸಿದರು. ಶರನ್ನವರಾತ್ರಿಯ ಅಂಗವಾಗಿ ಬಾಲ ಮುತ್ತೈದೆಯರಿಗೆ ವಿಶೇಷ ಪೂಜೆ ಸಲ್ಲಿಸಿ, ಮಂತ್ರಾಕ್ಷತೆಯನ್ನು ಸಮರ್ಪಣೆ ಮಾಡಿ ಫಲತಾಂಭೂಲವನ್ನು ವಿತರಿಸಲಾಯಿತು.
ಧಾರ್ಮಿಕ ಚಿಂತಕ ವೇ.ಬ್ರ. ಗೋಪಾಲಕೃಷ್ಣ ಅವಧಾನಿ ಮಾತನಾಡಿ, ನಮ್ಮ ದೇಶದ ಪರಂಪರೆ ,ಇತಿಹಾಸ, ಹಬ್ಬ ಹರಿದಿನ ಸಂಸ್ಕೃತಿಗಳ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹೇಳಿಕೊಡುವ ಕೆಲಸ ಪ್ರತಿನಿತ್ಯ ಶಾಲೆ ಮತ್ತು ಮನೆಯಲ್ಲಿ ಆಗಬೇಕು. ಮಕ್ಕಳಲ್ಲಿ ಶೌರ್ಯ, ಸಾಹಸ, ಪರಿಶ್ರಮ ಜ್ಞಾನವನ್ನು ತುಂಬಿಸಿಕೊಟ್ಟರೆ ಭವಿಷ್ಯದಲ್ಲಿ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲರು. ಮಕ್ಕಳು ಕೇಳುವುದನ್ನು ಕೊಡಿಸುವುದು ಮಾತ್ರವಲ್ಲ, ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸವನ್ನು ಪೋಷಕರು ಮಾಡುವಂತೆ ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ನಟರಾಜ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಕ್ಕಳಲ್ಲಿ ನೈತಿಕ ಪ್ರಜ್ಷೆ, ಮಾನವೀಯ ಗುಣ ಹೆಚ್ಚಾಗಲು ರಾಮಾಯಣ ,ಮಹಾಭಾರತ, ಉಪನಿಷತ್ತುಗಳ ಕತೆ ಮತ್ತು ಭಾರತೀಯ ಪರಂಪರೆ ಪರಿಚಯಿಸಿಕೊಡಿ ಎಂದು ಮನವಿ ಮಾಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಎನ್.ಪ್ರವೀಣ್, ಮಾಜಿ ಸದಸ್ಯ ಕೆ.ಆರ್.ನೀಲಕಂಠ, ವಕೀಲೆ ಕೌಸ್ತುಭ ಭಾರತಿಪುರ, ಶಾಲೆಯ ಮುಖ್ಯ ಶಿಕ್ಷಕಿ ಪಲ್ಲವಿ ಮಾತನಾಡಿದರು. ಪ್ರಮುಖರಾದ ಚೈತ್ರ, ಗಂಗಾ, ಭೂಮಿಕಾ ಮತ್ತು ಮಕ್ಕಳ ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.