ಮೇನಾಗರದಲ್ಲಿ ಗ್ರಾಮದಲ್ಲಿ ಸೇವಂತಿಗೆ ಹೂವು ಕಟ್ಟುತ್ತಿರುವ ರೈತ ಮಹಿಳೆಯರು
ಪಾಂಡವಪುರ: ಸೇವಂತಿಗೆ ಹೂವು ದೀಪಾವಳಿಯಲ್ಲಿ ದೇವರ ಮುಡಿಗೇರಲು ಸಿದ್ಧವಾಗಿದ್ದು, ಇದರಿಂದ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಮಾರುಕಟ್ಟೆಯಲ್ಲಿ ಈ ಹೂವಿನ ಬೆಲೆ ಕುಸಿದಿರುವುದು ರೈತರನ್ನು ಆತಂಕಕ್ಕೆ ದೂಡಿದೆ.
ಕಳೆದ ಗೌರಿ ಗಣೇಶ ವೇಳೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ ₹100–₹150 ಬೆಲೆಯಿತ್ತು. ಆಯುಧ ಪೂಜೆ ವೇಳೆ ಒಂದು ಮಾರಿಗೆ ₹60–₹70 ಸಿಕ್ಕಿತ್ತು. ಆದರೆ ದೀಪಾವಳಿಯಲ್ಲಿ ಇದರ ಬೆಲೆ ಕುಸಿದಿದ್ದು, ರೈತರನ್ನು ಕಂಗಾಲಾಗಿಸಿದೆ.
ಹಬ್ಬದಲ್ಲಿ ಎಲ್ಲೆಡೆ ದೇವರಿಗೆ ಪೂಜೆ ನಡೆಯಲಿದ್ದು, ಮನೆಮನೆಗಳಲ್ಲಿ ಎಣ್ಣೆ ದೀಪ ಹಚ್ಚಿ ಸೇವಂತಿಗೆ ಹೂವು ಮುಡಿಸುತ್ತಾರೆ. ಒಂದು ವಾರ ಮಹದೇಶ್ವರಸ್ವಾಮಿ ದೇವರ ಜಾತ್ರೆ ನಡೆಯಲಿದ್ದು, ದೀಪಾವಳಿಯ ಬಳಿಕ ಆರಂಭವಾಗುವ ಕಾರ್ತಿಕ ಮಾಸದಲ್ಲೂ ಪ್ರತಿ ಸೋಮವಾರ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ಸೇವಂತಿಗೆ ಹೂವು ಬಳಸುವುದು ವಾಡಿಕೆ.
ಆಯುಧಪೂಜೆಯಲ್ಲಿ ಆಯುಧ, ವಾಹನಗಳಿಗೆ ಹಾಗೂ ದೇವರ ಪೂಜೆಗೆ ಈ ಹೂವನ್ನೇ ಮುಡಿಸಿ ಪೂಜೆ ಸಲ್ಲಿಸಲಾಗುತ್ತದೆ. ರೈತರು ವರ್ಷವಿಡೀ ಸೇವಂತಿಗೆ ಬೆಳೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ತಾಲ್ಲೂಕಿನಲ್ಲಿ ಕೆ.ಆರ್.ಎಸ್. ಹಿನ್ನೀರಿನ ಗ್ರಾಮಗಳಾದ ಅಂತನಹಳ್ಳಿ, ಗಿರಿಯಾರಹಳ್ಳಿ, ಹೊಸಕನ್ನಂಬಾಡಿ, ಬನ್ನಂಗಾಡಿ, ಮಲ್ಲಿಗೆರೆ, ಹೊಸಸಾಯಪನಹಳ್ಳಿ, ಬಿಂಡಹಳ್ಳಿ, ಮೇನಾಗರ ಗ್ರಾಮಗಳ ರೈತರು ಈ ಹೂವು ಬೆಳೆಯುವುದನ್ನೇ ಪ್ರಮುಖ ಕೃಷಿ ಮಾಡಿಕೊಂಡಿದ್ದಾರೆ. ಸುಮಾರು 500 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಈ ಹೂವು ಬೆಳೆಯುತ್ತಿದ್ದು, 800ರಿಂದ 900 ಕುಟುಂಬಗಳು ಇದರಲ್ಲಿ ತೊಡಗಿಸಿಕೊಂಡಿವೆ.
ಪಾಂಡವಪುರ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಬೆಳೆಯುತ್ತಿದ್ದು, ಹಿಂದಿನ ದಿನಗಳಲ್ಲಿ ಬೆಳೆಗಾರರು ಕಷ್ಟಪಟ್ಟು ಗಿಡದ ಪ್ರತಿ ಗುಣಿಗೆ ಬಿಂದಿಗೆಯಲ್ಲಿ ನೀರು ಹಾಕಿ ಬೆಳೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹನಿ ನೀರಾವರಿ ಬಳಸಿ ಬೆಳೆ ತೆಗೆಯುತ್ತಿದ್ದಾರೆ. ಬೆಳೆಗಾರರು ತಮಿಳುನಾಡಿನಿಂದ ಕಸಿಮಾಡಿದ ಸೇವಂತಿಗೆ ಬೇರು ತಂದು ನೆಟ್ಟು, ಪೂರ್ಣಿಮಾ, ಸೆಂಟ್ ಯೆಲ್ಲೊ, ಚಾಕೊಲೇಟ್, ಬಸ್ಕಿನ್ ವೈಟ್ ತಳಿಯ ಹೂವು ಬೆಳೆಯುತ್ತಾರೆ. ಹೂವು ಬಿಟ್ಟ ಮೇಲೆ ಮಹಿಳೆಯರು ಬಿಡಿಸಿ ಮನೆ ಮನೆಗೆ ತಂದು ಮನೆಮಂದಿಯೆಲ್ಲಾ ಕುಳಿತು ಕಟ್ಟುತ್ತಾರೆ.
ಘಮಘಮಿಸುವ ಆಕರ್ಷಕ ಸೇವಂತಿಗೆ ಹೂವಿನ ಕತೆಯ ಹಿಂದೆ ಹೂವು ಬೆಳೆಗಾರರ ಶ್ರಮ ಮತ್ತು ಬೆವರಿನ ವಾಸನೆಯನ್ನು ನಾವು ಮರೆಯುವಾಗಿಲ್ಲ.
ರಾಮನಗರ ಮಾರುಕಟ್ಟೆಯಲ್ಲಿ ಮಾರಾಟ
‘ಶ್ರಮಪಟ್ಟು ಹೂವು ಬೆಳೆಯುತ್ತಿದ್ದು ಹೂವು ಬಿಡಿಸಲು ಕೂಲಿಕಾರರು ದೊರೆಯುತ್ತಿಲ್ಲ. ಕಟ್ಟಿದ ಹೂವನ್ನು ದೂರದ ನಗರಗಳಿಗೆ ಸಾಗಾಣಿಕೆ ಮಾಡುವುದು ತುಂಬ ಕಷ್ಟ. ರಾಮನಗರದಲ್ಲಿ ರೈತರೇ ಹೂವು ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಅಲ್ಲಿ ನಾವು ಹೂವನ್ನು ಮಾರಾಟ ಮಾಡುತ್ತೇವೆ’ ಎಂದು ಮೇನಾಗರ ಗ್ರಾಮದ ಹೂವು ಬೆಳೆಗಾರ ಎಂ.ಟಿ.ರವಿಕುಮಾರ್ ತಿಳಿಸಿದರು.
ಬೆಳೆಗಾರರಿಗೆ ಬೇಕು ಮಾರುಕಟ್ಟೆ
‘ಈ ಭಾಗದ ಸೇವಂತಿಗೆ ಬೆಳೆಗಾರರಿಗೆ ಮಾರುಕಟ್ಟೆಯ ಅವಶ್ಯಕತೆ ಇದೆ. ಈಗ ನಾವು ದೂರದ ಮೈಸೂರು ಮತ್ತು ಬೆಂಗಳೂರು ಕಡೆಗೆ ಮಾರಾಟ ಮಾಡಲು ಸಾಗಿಸಬೇಕಿದೆ’ ಎನ್ನುತ್ತಾರೆ ಅಂತನಹಳ್ಳಿ ಹೂವು ಬೆಳೆಗಾರರಾದ ಗೋವಿಂದಯ್ಯ ಎ.ಎಸ್.ಕೃಷ್ಣ ಪುಟ್ಟಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.