ADVERTISEMENT

ಆಮ್ಲಜನಕ ಪೂರೈಕೆ ವಿಚಾರ: ಮಂಡ್ಯ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ

ಜನಪ್ರತಿನಿಧಿಗಳ ರಾಜಕೀಯ ಮೇಲಾಟದಿಂದ ಅಧಿಕಾರಿಗಳಿಗೆ ತಲೆನೋವು

​ಪ್ರಜಾವಾಣಿ ವಾರ್ತೆ
Published 9 ಮೇ 2021, 14:17 IST
Last Updated 9 ಮೇ 2021, 14:17 IST
ಈಚೆಗೆ ಮಂಡ್ಯದಲ್ಲಿ ನಡೆದ ಸಭೆಯಿಂದ ಹೊರನಡೆಯುತ್ತಿರುವ ಸಂಸದೆ ಸುಮಲತಾ
ಈಚೆಗೆ ಮಂಡ್ಯದಲ್ಲಿ ನಡೆದ ಸಭೆಯಿಂದ ಹೊರನಡೆಯುತ್ತಿರುವ ಸಂಸದೆ ಸುಮಲತಾ   

ಮಂಡ್ಯ: ಆಮ್ಲಜನಕ ಪೂರೈಕೆ ವಿಚಾರದಲ್ಲಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ನಡುವೆಹಗ್ಗಾಜಗ್ಗಾಟ ತಾರಕಕ್ಕೇರುತ್ತಿದ್ದು ಕೋವಿಡ್‌ ವಿರುದ್ಧ ಹೋರಾಟ ನಡೆಸುತ್ತಿರುವ ಅಧಿಕಾರಿಗಳಿಗೆ ತಲೆನೋವಾಗಿದೆ.

ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಜಿಲ್ಲೆಗೆ ನಿತ್ಯ 2 ಕೆಎಲ್‌ ಆಮ್ಲಜನಕವನ್ನು ಸ್ವಂತ ಹಣದಿಂದ ಪೂರೈಸುವುದಾಗಿ ಸಂಸದೆ ಸುಮಲತಾ ತಿಳಿಸಿದ್ದರು. ನಂತರ ಮದ್ದೂರು ತಾಲ್ಲೂಕು ಆಸ್ಪತ್ರೆ ಹಾಗೂ ಭಾರತೀನಗರ ಜಿ.ಮಾದೇಗೌಡ ಆಸ್ಪತ್ರೆಗೆ ಸುಮಲತಾ ಅವರ ಹೆಸರಿನಲ್ಲಿ ಆಮ್ಲಜನಕ ಸಿಲಿಂಡರ್‌ ಸರಬರಾಜಾಗಿದ್ದವು.

ಈಚೆಗೆ ನಡೆದ ಸಭೆಯಲ್ಲಿ ಜೆಡಿಎಸ್‌ ಶಾಸಕರು, ಯಾರಿಗೂ ಸಿಗದ ಆಮ್ಲಜನಕ ಸಂಸದರಿಗೆ ಮಾತ್ರ ಹೇಗೆ ದೊರೆಯುತ್ತಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಸಂಸದರು ಕಳುಹಿಸಿರುವ ಆಮ್ಲಜನಕ ಸಿಲಿಂಡರ್‌ಗಳಿಗೆ ಅವರು ಹಣ ಪಾವತಿಸಿಲ್ಲ ಎಂದು ತಿಳಿಸಿದ್ದರು.

ADVERTISEMENT

ನಂತರ ಸಮಲತಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್‌ ಶಾಸಕರು, ಸರ್ಕಾರಿ ಕೋಟಾದಡಿ ಜಿಲ್ಲೆಗೆ ಪೂರೈಕೆಯಾಗುತ್ತಿರುವ ಆಮ್ಲಜನಕವನ್ನು ತಾವು ಪೂರೈಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ, ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ಸುಮಲತಾ ಸಭೆಯಿಂದ ಹೊರ ನಡೆದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಶನಿವಾರ ಮಂಡ್ಯ ಉಪ ವಿಭಾಗಾಧಿಕಾರಿ ಐಶ್ವರ್ಯಾ ಪತ್ರಿಕಾ ಪ್ರಕಟಣೆ ಹೊರಡಿಸಿ, ಸುಮಲತಾ ಅವರು ಮೇ 5 ರಿಂದ ಒಟ್ಟು 38 ಸಿಲಿಂಡರ್‌ ಆಮ್ಲಜನಕ ಒದಗಿಸಿದ್ದಾರೆ ಎಂದು ತಿಳಿಸದ್ದಾರೆ.

ಮೇ 5ರಿಂದ 6ರವರೆಗೆ 18 ಸಿಲಿಂಡರ್‌ ಆಮ್ಲಜನಕ ಒದಗಿಸಲಾದ್ದು ಬೆಂಗಳೂರಿನ ಎಂ.ಎಸ್‌. ಆಕ್ಸಿ ಪ್ಲಾಂಟ್‌ನಿಂದ ಪಡೆಯಲಾಗಿದೆ. ಮೇ 6ರಿಂದ 7ರವರೆಗೆ ಮಂಡ್ಯದ ವೆಂಕಟೇಶ್ವರ ಏಜೆನ್ಸಿಯಿಂದ 20 ಸಿಲಿಂಡರ್‌ ಒದಗಿಸಲಾಗಿದೆ. ಇವುಗಳನ್ನು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಏಜೆನ್ಸಿಗಳಿಂದ ಆಮ್ಲಜನಕ ಖರೀದಿ ಮಾಡಿರುವ ರಶೀತಿಗಳನ್ನು ಸುಮಲತಾ ಬಿಡುಗಡೆ ಮಾಡಿದ್ದು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಕೋವಿಡ್‌ ಸಂಕಷ್ಟ ಕಾಲದಲ್ಲಿ ಜನರ ಉಳಿಸುವ ಕೆಲಸ ಮಾಡುವಾಗ ಬೇರೆಯವರು ರಾಜಕೀಯ ಮಾಡುತ್ತಿರುವುದು ನನಗೆ ಅಸಹ್ಯ ತರಿಸಿದೆ’ ಎಂದು ಸುಮಲತಾ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ತಲೆನೋವು: ಆಮ್ಲಜನಕ ಪೂರೈಕೆ ವಿಚಾರದಲ್ಲಿ ಜಿಲ್ಲೆಯಲ್ಲಿ ಶಾಸಕರು ಹಾಗೂ ಸಂಸದರ ನಡುವೆ ನಡೆಯುತ್ತಿರುವ ಬೆಳವಣಿಗೆಗಳು ಅಧಿಕಾರಿಗಳ ವಲಯದಲ್ಲಿ ತಲೆನೋವಾಗಿ ಪರಿಣಮಿಸಿದೆ. ಎರಡೂ ಕಡೆಯಿಂದ ಅಧಿಕಾರಿಗಳ ಮೇಲೆ ಒತ್ತಡ ಬರುತ್ತಿದ್ದು ಅದರ ನಡುವೆ ಕೆಲಸ ಮಾಡುವುದು ಸವಾಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್‌ ಸಂಕಷ್ಟ ಕಾಲದಲ್ಲಿ ರಾಜಕೀಯ ಮೇಲಾಟ ನಡೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಸಂಕಷ್ಟ ಕಾಲದಲ್ಲಿ ಯಾರೇ ಜನರಿಗೆ ಸಹಾಯ ಮಾಡಿದರೂ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಸುಮಲತಾ ಅವರು ಆಮ್ಲಜನಕ ನೀಡಿದರೆ ಪಕ್ಷಭೇದ ಮರೆತು ಅದನ್ನು ಸ್ವಾಗತಿಸಬೇಕು. ಆದರೆ ಜೆಡಿಎಸ್ ಶಾಸಕರು ರಾಜಕೀಯ ಮಾಡುತ್ತಿರುವುದು ಖಂಡನೀಯ’ ಎಂದು ಹೊಳಲು ಗ್ರಾಮದ ನಾಗೇಶ್‌ ತಿಳಿಸಿದರು.

‘ಸಂಸದರು ಬೆಂಗಳೂರಿನಲ್ಲಿ ಕುಳಿತು ಆಮ್ಲಜನಕ ಕೊಟ್ಟಿದ್ದೇನೆ ಎಂದು ಹೇಳುತ್ತಿರುವುದು ಸರಿಯಲ್ಲ. ಜಿಲ್ಲೆಗೆ ಬಂದು ಅಧಿಕಾರಿಗಳ ಜೊತೆ ನಿಂತು ಕೆಲಸ ಮಾಡಬೇಕು. ಎಲ್ಲೋ ಕುಳಿತು ಬೆಂಬಲಿಗರನ್ನು ಇಟ್ಟುಕೊಂಡು ಅವರೂ ರಾಜಕಾರಣ ಮಾಡುತ್ತಿದ್ದಾರೆ’ ಎಂದು ನಗರದ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

***

ಉಸ್ತುವಾರಿ ಸಚಿವರ ಮೌನ

ಸಂಸದೆ ಸುಮಲತಾ ಹಾಗೂ ಜೆಡಿಎಸ್‌ ಶಾಸಕರ ನಡುವೆ ಆಮ್ಲಜನಕ ವಿಚಾರದಲ್ಲಿ ನಡೆಯುತ್ತಿರುವ ಆರೋಪ– ಪ್ರತ್ಯಾರೋಪ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮೌನಕ್ಕೆ ಶರಣಾಗಿದ್ದಾರೆ.

‘ಆ ವಿಚಾರ ನನಗೆ ಗೊತ್ತಿಲ್ಲ, ಸುಮಲತಾ ಅವರು ಆಮ್ಲಜನಕ ಕೊಟ್ಟಿದ್ದರೆ ಅವರೇ ಅದಕ್ಕೆ ಉತ್ತರ ನೀಡುತ್ತಾರೆ. ಆ ವಿಚಾರ ನಾನು ಮಾತನಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

********

ಸಂಸದೆ ಸುಮಲತಾ ಅವರು ಆಮ್ಲಜನಕ ಪೂರೈಕೆಗೆ ಹಣ ಪಾವತಿ ಮಾಡಿದ್ದಾರೋ, ಇಲ್ಲವೋ ಎಂಬ ಯಾವ ವಿಚಾರವೂ ನನಗೆ ತಿಳಿದಿಲ್ಲ

–ವಿ.ಆರ್‌.ಶೈಲಜಾ, ನೋಡೆಲ್‌ ಅಧಿಕಾರಿ, ಆಮ್ಲಜನಕ ಸರಬರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.