ಮಂಡ್ಯ: ಯುಗಾಗಿ ಹಬ್ಬಕ್ಕಾಗಿ ಬೆಂಗಳೂರು, ಮುಂಬೈ ಹಾಗೂ ಇತರ ನಗರಗಳಿಂದ ಊರಿಗೆ ಮರಳುತ್ತಿರುವ ಜನರ ಮೇಲೆ ಆರೋಗ್ಯ ಇಲಾಖೆ ಕಣ್ಣಿಟ್ಟಿದೆ. ಜಿಲ್ಲೆಯ ಗಡಿಭಾಗದಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ವಲಸಿಗರ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.
ನಾಗಮಂಗಲ, ಕೆ.ಆರ್.ಪೇಟೆ ತಾಲ್ಲೂಕಿನ ಅಪಾರ ಸಂಖ್ಯೆಯ ಜನರು ಬೇರೆ ನಗರಗಳಲ್ಲಿ ನೆಲೆಸಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಲಾಕ್‌ಡೌನ್ ಆಗಿದ್ದು ವಲಸಿಗರು ಊರಿಗೆ ಮರಳುತ್ತಿದ್ದಾರೆ. ಜೊತೆಗೆ ಯುಗಾದಿ ಹಬ್ಬದ ನೆಪದಿಂದಲೂ ವಾಪಸ್ ಬರುತ್ತಿರುವವರ ಸಂಖ್ಯೆ ಏರಿಕೆಯಾಗಿದೆ.
ಹೆದ್ದಾರಿಗಳ ಮೂಲಕ ಜಿಲ್ಲೆ ಪ್ರವೇಶಿಸುತ್ತಿರುವ ಜನರನ್ನು ಚೆಕ್‌ಪೋಸ್ಟ್‌ಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತಿದೆ. ಜ್ವರ ಕಂಡು ಬಂದರೆ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಿಡಘಟ್ಟ, ಶ್ರೀರಂಗಪಟ್ಟಣ ಸೇರಿ ಮಳವಳ್ಳಿ, ಕೆ.ಆರ್.ಪೇಟೆ, ದೇವಲಾಪುರದಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
‘ಚೆಕ್‌ಪೋಸ್ಟ್‌ಗಳಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಕಿಟ್ ವಿತರಣೆ ಮಾಡಲಾಗಿದೆ. ಜಿಲ್ಲೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಸೋಂಕಿನ ಶಂಕೆ ಕಂಡುಬಂದರೆ ಅವರನ್ನು ಪ್ರತ್ಯೇಕ ವಾರ್ಡ್‌ಗೆ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.