ADVERTISEMENT

ಮದ್ದೂರು | ಹಿಂದೂಗಳು ಜಾಗೃತರಾಗದಿದ್ದರೆ ಉಳಿಗಾಲವಿಲ್ಲ: ಸಿ.ಟಿ.ರವಿ

ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ: ಬಿಜೆಪಿ, ಹಿಂದುತ್ವಪರ ಕಾರ್ಯಕರ್ತರ ಶಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:57 IST
Last Updated 11 ಸೆಪ್ಟೆಂಬರ್ 2025, 6:57 IST
ಮದ್ದೂರು ಪಟ್ಟಣದಲ್ಲಿ ಬುಧವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು – ಪ್ರಜಾವಾಣಿ ಚಿತ್ರ: ಸಂತೋಷ್‌ ಚಂದ್ರಮೂರ್ತಿ 
ಮದ್ದೂರು ಪಟ್ಟಣದಲ್ಲಿ ಬುಧವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು – ಪ್ರಜಾವಾಣಿ ಚಿತ್ರ: ಸಂತೋಷ್‌ ಚಂದ್ರಮೂರ್ತಿ    

ಮದ್ದೂರು (ಮಂಡ್ಯ ಜಿಲ್ಲೆ): ‘ಅಣ್ಣ ಅಂದ್ರೆ ನಾವೂ ಅಣ್ಣ ಅಂತೀವಿ. ನೀವು ಏನ್ಲ ಅಂದ್ರೆ ನಿಮ್‌ ತಲೆ ತೆಗೆಯುತ್ತೇವೆ. ನಮ್ಮಲ್ಲಿ ಉರಿಗೌಡ, ನಂಜೇಗೌಡರು ಇದ್ದಾರೆ. ಗಣೇಶ ಮೂರ್ತಿ ಮೇಲೆ ಕಲ್ಲು ಹೊಡೆದವರ ಮೇಲೆ ಜೆಸಿಬಿ ಹತ್ತಿಸಿ. ನಿಮಗೆ ತಾಕತ್ತಿದ್ರೆ ಆ ಕೆಲಸ ಮಾಡಿ, ಇಲ್ಲಾಂದ್ರೆ ಇಲ್ಲೂ ಯೋಗಿ ಬರ್ತಾರೆ. ಹಿಂದೂಗಳು ಜಾಗೃತರಾಗದಿದ್ದರೆ ಉಳಿಗಾಲವಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು. 

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಧರ್ಮ, ದೇಶಕ್ಕಾಗಿ ನಮ್ಮ ಜನ ತಲೆಕೊಡೋದಕ್ಕೂ ಹಿಂಜರಿಯಲ್ಲ. ಹಿಂದೂಗಳಾದ ನಾವು ಜಾತಿಯತೇ ಬಿಟ್ಟು ಒಂದಾಗಬೇಕು. ಜಾತಿ ಮೂಲಕ ನಮ್ಮನ್ನು ಒಡೆದು ಹಾಕುತ್ತಿದ್ದಾರೆ ಎಂದರು. 

‘ತಾಲಿಬಾನ್ ಮಾನಸಿಕತೆಯನ್ನು ಕರ್ನಾಟಕದಲ್ಲಿ ಯಾರು ಬೆಳೆಸುತ್ತಿದ್ದಾರೆ ಎಂಬುದು ತನಿಖೆ ಆಗಬೇಕು. ‘ನಿಮ್ಮ ಜೊತೆ ಇರುತ್ತೇವೆ’ ಎಂಬ ಮಾನಸಿಕತೆಯನ್ನು ಸಿಎಂ, ಡಿಸಿಎಂ ತೋರಿಸುವುದರಿಂದಲೇ ಅವರಿಗೆ ಧೈರ್ಯ ಬರುತ್ತದೆ. ತಾಕತ್ ಕಡಿಮೆ ಇದ್ದ ಕಾರಣ ಕಲ್ಲು ಹೊಡೆದಿದ್ದಾರೆ. ಸ್ವಲ್ಪ ತಾಕತ್ ಬಂದರೆ ಜೀವಂತ ಸುಡುತ್ತಾರೆ’ ಎಂದು ಆರೋಪಿಸಿದರು. 

ADVERTISEMENT

ತಾಲಿಬಾನ್‌ ಸರ್ಕಾರವಾಗಲು ಬಿಡಲ್ಲ:

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ‘ಕರ್ನಾಟಕವನ್ನ ಇಟಲಿ, ತಾಲಿಬಾನ್ ಅಥವಾ ಮುಲ್ಲಾ ಸರ್ಕಾರ ಆಗಲು ಬಿಡಲ್ಲ. ಈ ಘಟನೆ ಮರೆತರೇ ನಮಗೆ ಉಳಿಗಾಲ ಇಲ್ಲ. ನಾವು ಜೆಡಿಎಸ್‌ನವರು ಹಾಲು-ಜೇನು ರೀತಿ ಇದ್ದೀವಿ. ಕಾಂಗ್ರೆಸ್‌ ಸರ್ಕಾರ ಡಿಜೆ ಬ್ಯಾನ್‌ ಮಾಡಿದೆ, ಮಸೀದಿ ಮುಂದೆ ಮೆರವಣಿಗೆ ರದ್ದು ಮಾಡಿದೆ, ಹೀಗೆಯೇ ಬಿಟ್ಟರೆ ಗಣೇಶ ಹಬ್ಬ ಬ್ಯಾನ್‌ ಮಾಡ್ತಾರೆ. ಹೀಗಾಗಿ ನಾವೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಬೇಕು ಎಂದು ಕರೆ ನೀಡಿದರು. 

‘ಮಹಿಳೆಯರು ಮೊದಲ ಬಾರಿಗೆ ಮದ್ದೂರಿನಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ನಿಮ್ಮ ಹೋರಾಟ ದೇಶದಾದ್ಯಂತ ಸದ್ದು ಮಾಡಿದೆ. ಮಂಡ್ಯ ಅಂದ್ರೆ ಇಂಡಿಯಾ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇನ್ನು ಎರಡೇ ವರ್ಷ ನಿಮ್ಮ ಅಧಿಕಾರ. ಮುಂದೆ ಬಿಜೆಪಿ ಸರ್ಕಾರ ಬರುತ್ತೆ’ ಎಂದು ನುಡಿದರು. 

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ನಾರಾಯಣ ಛಲವಾದಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಶಾಸಕರಾದ ಎಚ್‌.ಟಿ.ಮಂಜು, ಶ್ರೀವತ್ಸ, ಮಾಜಿ ಸಂಸದೆ ಸುಮಲತಾ ಅಂಬರೀಶ್‌, ಮಾಜಿ ಸಚಿವರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಸುರೇಶ್‌ಗೌಡ, ಕೆ.ಅನ್ನದಾನಿ, ಬಿಜೆಪಿ ಮುಖಂಡರಾದ ಭಾಸ್ಕರ್ ರಾವ್, ಎಸ್‌.ಪಿ.ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್‌, ಸಚ್ಚಿದಾನಂದ ಇಂಡುವಾಳು, ಮಾದನಾಯಕನಹಳ್ಳಿ ರಾಜಣ್ಣ ಸೇರಿದಂತೆ ಬಜರಂಗದಳ, ಹಿಂದುತ್ವ ಪರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. 

ಮದ್ದೂರು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ  ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ನೃತ್ಯ ಮಾಡಿದ ಹಿಂದುತ್ವ ಪರ ಕಾರ್ಯಕರ್ತರು 
ಮೆರವಣಿಗೆಯಲ್ಲಿ ರೆಬೆಲ್‌ಸ್ಟಾರ್‌ ಅಂಬರೀಶ್‌ ಕಟೌಟ್‌ ಗಮನ ಸೆಳೆಯಿತು 
ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಜೋಡಿಬಸವ ಮತ್ತು ಗಾರುಡಿ ಗೊಂಬೆಗಳ ಪ್ರದರ್ಶನ ಮೆರುಗು ನೀಡಿತು 
ಹನುಮ ಪಾತ್ರಧಾರಿ 
ಮದ್ದೂರು ಪಟ್ಟಣದ ಹೊರವಲಯದ ಶಿಂಷಾ ನದಿಯಲ್ಲಿ ಬುಧವಾರ ಸಂಜೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು 

ಜಾತಿ ತೊರೆದು ಹಿಂದೂಗಳು ಒಗ್ಗೂಡಬೇಕು ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಿರಿ: ಅಶೋಕ್‌  ಮದ್ದೂರು ಘಟನೆ: ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ

‘ಮದ್ದೂರು ಹೊತ್ತಿ ಉರಿಯುವಾಗ ವಿದೇಶ ಪ್ರವಾಸದಲ್ಲಿರುವ ಶಾಸಕ’
‘ಮದ್ದೂರು ಘಟನೆಯನ್ನು ಗೃಹ ಸಚಿವರು ಸಣ್ಣಪುಟ್ಟ ಘಟನೆ ಅನ್ನುತ್ತಾರೆ. ನಿಮ್ಮ ಸ್ಥಾನಕ್ಕೆ ಗೌರವವಿದ್ರೆ ಮದ್ದೂರಿಗೆ ಬನ್ನಿ. ನಿಮ್ಮ ಶಾಸಕರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ. ಮದ್ದೂರು ಪಟ್ಟಣ ಹೊತ್ತಿ ಉರಿಯುವ ವೇಳೆ ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ‘ಸರ್ಕಾರಕ್ಕೆ ಸ್ವಲ್ಪನಾದ್ರು ಮಾನ ಮರ್ಯಾದೆ ಇದ್ರೆ ದೇಶದ್ರೋಹಿಗಳ ವಿರುದ್ದ ಕ್ರಮಕೈಗೊಳ್ಳಬೇಕು. ಗೂಂಡಾ ಕಾಯ್ದೆ ಹಾಕಿ ಕ್ರಮ ಜರುಗಿಸಬೇಕು. ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ. ನಾವು ಹಿಂದೂ ಸಂಘಟನೆ ಪರ ಇದ್ದೇವೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು. 
‘ಹಿಂದೂಗಳ ತಾಳ್ಮೆ ಪರೀಕ್ಷಿಸಬೇಡಿ’
ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಓಲೈಕೆ ರಾಜಕೀಯ ಮಾಡ್ತಾ ಇದೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಪೊಲೀಸ್ ಠಾಣೆಯನ್ನು ಸುಡಲು ಹೋದವರು ಮುಸ್ಲಿಮರು. ಇಂಥವರ ಮೇಲಿನ ಪ್ರಕರಣ ವಾಪಸ್‌ ಪಡೆಯುತ್ತಾರೆ. ಇದು ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರ ಅಲ್ಲ ಇದು ಜನ ವಿರೋಧಿ ಸರ್ಕಾರ’ ಎಂದು ಆರೋಪಿಸಿದರು.  ‘ನಾಗಮಂಗಲದಲ್ಲಿ ಕಳೆದ ವರ್ಷ ಗಲಾಟೆ ಮಾಡಿದ್ರು ಕೆರಗೋಡಿನಲ್ಲಿ ಧ್ವಜ ಹಾರಿಸಲು ಬಿಡಲಿಲ್ಲ. ಕಲ್ಲು ತೂರಿದವರ ಮೇಲೆ ಕೇಸ್ ಹಾಕುವ ಬದಲು ಸರ್ಕಾರ ನಾಟಕ ಆಡುತ್ತಿದೆ. ಕೊನೆಗೆ ಬಿಜೆಪಿ ಜೆಡಿಎಸ್‌ ನಾಯಕರನ್ನು ಕಿಡಿಗೇಡಿಗಳು ಅಂತಾರೆ. ಜನ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡದೆ ಜನರನ್ನು ಅಯ್ಯೋ ಅನಿಸುತ್ತಿದ್ಧಾರೆ. ನಿಮ್ಮ ತುಷ್ಟೀಕರಣ ರಾಜಕೀಯ ಹೆಚ್ಚು ದಿನ ನಡೆಯಲ್ಲ’ ಎಂದು ಗುಡುಗಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.