ADVERTISEMENT

ಮಂಡ್ಯ | ಅರ್ಹರಿಗೆ 120 ನಿವೇಶನ: ಶಾಸಕ ಪಿ.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:58 IST
Last Updated 3 ಫೆಬ್ರುವರಿ 2026, 4:58 IST
ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ತಂಗಳಗೆರೆಯಲ್ಲಿ ನಡೆದ ರವಿ ಗೂಡು- ಪಿ. ರವಿಕುಮಾರ್ ಗೌಡ ಆಶ್ರಯ ಬಡಾವಣೆ ನಿರ್ಮಾಣ ಶಿಲಾನ್ಯಾಸವನ್ನು ಶಾಸಕ ಪಿ.ರವಿಕುಮಾರ್‌ ನೆರವೇರಿಸಿದರು 
ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ತಂಗಳಗೆರೆಯಲ್ಲಿ ನಡೆದ ರವಿ ಗೂಡು- ಪಿ. ರವಿಕುಮಾರ್ ಗೌಡ ಆಶ್ರಯ ಬಡಾವಣೆ ನಿರ್ಮಾಣ ಶಿಲಾನ್ಯಾಸವನ್ನು ಶಾಸಕ ಪಿ.ರವಿಕುಮಾರ್‌ ನೆರವೇರಿಸಿದರು    

ಮಂಡ್ಯ: ‘ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಶಾಸಕನ ಕರ್ತವ್ಯವಾಗಿದೆ’ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಹಲ್ಲೆಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಬಸರಾಳು ಹೋಬಳಿಯ ತಂಗಳಗೆರೆಯಲ್ಲಿ ಭಾನುವಾರ ನಡೆದ ರವಿ ಗೂಡು- ಪಿ. ರವಿಕುಮಾರ್ ಗೌಡ ಆಶ್ರಯ ಬಡಾವಣೆ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರ್ಹರಿಗೆ ನಿವೇಶನ ನೀಡಲು ಇಂದು ಶಿಲಾನ್ಯಾಸ ಮಾಡಲಾಗಿದೆ. ಸರ್ಕಾರಿ ಜಾಗ ಕೇವಲ ಒಬ್ಬರದಲ್ಲ ಅದು ಎಲ್ಲರ ಜಾಗ. ರೈತರು ತಮ್ಮ ಗದ್ದೆಗಳಲ್ಲಿ ರಸ್ತೆ 5-10 ಅಡಿ ಜಾಗ ಬಿಟ್ಟರೆ ಉತ್ತಮ ರಸ್ತೆ ಕಲ್ಪಿಸಬಹುದು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಾಗವಾಗಿ ಸಾಗಣೆ ಮಾಡಬಹುದು ಎಂದು ತಿಳಿಸಿದರು.

ADVERTISEMENT

120 ನಿವೇಶನಗಳನ್ನು ಈ ಜಾಗದಲ್ಲಿ ನೀಡಲಾಗುವುದು ಈಗಾಗಲೇ 80 ಹಕ್ಕುಪತ್ರಗಳನ್ನು ಸಿದ್ಧವಿವೆ. ಬಾಕಿ ಇರುವ ನಿವೇಶನಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ನಂತರ ನಾನೇ ನಿಮ್ಮ ಮನೆ ಬಾಗಿಲಿಗೆ ಬಂದು ಹಕ್ಕು ಪತ್ರಗಳನ್ನು ವಿತರಿಸುತ್ತೇನೆ ಎಂದು ಹೇಳಿದರು.

ಈ ಬಾರಿ ಬೂದನೂರು ಉತ್ಸವದಲ್ಲಿ 50 ಹಕ್ಕು ಪತ್ರಗಳನ್ನು ನೀಡಲು ಸಿದ್ಧತೆ ಮಾಡಲಾಗಿದೆ. ಹುಲಿವಾನದಲ್ಲಿ 8 ಎಕರೆ ಜಾಗವನ್ನು ಗುರುತಿಸಿ 550 ಮಂದಿಗೆ ನಿವೇಶನ ನೀಡಲು ಸಿದ್ಧತೆ ನಡೆಸಲಾಗಿದೆ. ಬಸರಾಳಲ್ಲಿ 2 ಎಕರೆ ಜಾಗ ಗುರುತಿಸಿದ್ದು, ಬಡವರಿಗೆ 3 ತಿಂಗಳೊಳಗಾಗಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಸಿ.ತ್ಯಾಗರಾಜು, ಚಿಕ್ಕಬಳ್ಳಿ ಕೃಷ್ಣ, ತಹಶೀಲ್ದಾರ್ ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಇಒ‌ ಲೋಕೇಶ್‌ಮೂರ್ತಿ, ಸಿ.ಎಂ. ದ್ಯಾವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರು, ಕಾಂಗ್ರೆಸ್‌ ಮುಖಂಡರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.