ADVERTISEMENT

ಆಧಾರವಿಲ್ಲದ ಹೇಳಿಕೆ ನೀಡುವ ಜೆಡಿಎಸ್‌: ನಾರಾಯಣಗೌಡ ಟೀಕೆ

ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ಕಲೆ ಸಿದ್ಧಿಸಿಕೊಂಡ ಮುಖಂಡರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 3:55 IST
Last Updated 29 ನವೆಂಬರ್ 2021, 3:55 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಭಾರತಿ ಕಲ್ಯಾಣ ಮಂಟಪದಲ್ಲಿ, ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಉದ್ಘಾಟಿಸಿದರು. ನಾರಾಯಣಗೌಡ, ಬೂಕಹಳ್ಳಿ ಮಂಜು ಇದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಭಾರತಿ ಕಲ್ಯಾಣ ಮಂಟಪದಲ್ಲಿ, ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಉದ್ಘಾಟಿಸಿದರು. ನಾರಾಯಣಗೌಡ, ಬೂಕಹಳ್ಳಿ ಮಂಜು ಇದ್ದರು   

ಶ್ರೀರಂಗಪಟ್ಟಣ: ಜೆಡಿಎಸ್‌ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಂಡ್ಯ ಜಿಲ್ಲೆಗೆ ಸಾವಿರ ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎಂದು ಆಧಾರವಿಲ್ಲದ ಹೇಳಿಕೆ ನೀಡಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಬಾಬುರಾ ಯನಕೊಪ್ಪಲು ಭಾರತಿ ಕಲ್ಯಾಣ ಮಂಟಪದಲ್ಲಿ, ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಗೆ ಜೆಡಿಎಸ್‌ ಪಕ್ಷದಿಂದ ಅಷ್ಟೇನೂ ಅನುಕೂಲ ಆಗಿಲ್ಲ. ಹಲವು ವರ್ಷಗಳ ಕಾಲ ನಾನು ಆ ಪಕ್ಷದಲ್ಲೇ ಇದ್ದವನು. ಅವರ ನಡವಳಿಕೆಯನ್ನು ಹತ್ತಿರದಿಂದ ಬಲ್ಲೆ. ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ಕಲೆ ಅವರಿಗೆ ಸಿದ್ಧಿಸಿದೆ ಎಂದರು.

ADVERTISEMENT

ಕಾಂಗ್ರೆಸ್‌ ಪಕ್ಷದಲ್ಲಿ ಮೂರು ಗುಂಪುಗಳಿದ್ದು, ನಾಲ್ಕನೇ ಗುಂಪೂ ಸೃಷ್ಟಿಯಾಗುತ್ತಿದೆ. ಪರಸ್ಪರ ಕಾಲೆಳೆ ಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು 6 ತಿಂಗಳಿಂದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜತೆ ಸಂಪರ್ಕದಲ್ಲಿದ್ದು, ಅವರನ್ನು ಗೆಲ್ಲಿಸ ಬೇಕು ಎಂದು ಮನವಿ ಮಾಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿಗೆ ಸ್ಥಳೀಯ ಸಂಸ್ಥೆಗಳ ಸಮಸ್ಯೆ ಬಗ್ಗೆ ಏನೂ ಗೊತ್ತಿಲ್ಲ. ಕಾಂಗ್ರೆಸ್‌ ನಾಯಕರ ಮನೆಯಲ್ಲಿದ್ದವರು ಈಗ ಅಭ್ಯರ್ಥಿಯಾಗಿದ್ದಾರೆ. ಕೈಮುಗಿಯುವ ಕಲೆ ಮಾತ್ರ ಅವರಿಗೆ ಕರಗತವಾಗಿದೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಮಾತನಾಡಿ, ಎರಡೂವರೆ ದಶಕಗಳಿಂದ ಬಿಜೆಪಿ ಸಂಘಟನೆಗೆ ದುಡಿದಿದ್ದೇನೆ. ಗ್ರಾಮ ಪಂಚಾಯಿತಿ, ಪುರಸಭೆ, ನಗರ ಸಭೆಗಳ ಸ್ಥಿತಿಗತಿ ಅರಿತಿದ್ದೇನೆ. ಚುನಾವಣೆಯಲ್ಲಿ ಗೆಲ್ಲಿಸಿದರೆ ಮಂಡ್ಯ ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಪಕ್ಷದ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ವಿಜಯಕುಮಾರ್‌, ಮೈ.ವಿ. ರವಿಶಂಕರ್‌ ಮಾತನಾಡಿದರು.

ಪಕ್ಷದ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌.ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ.ಶ್ರೀಧರ್‌, ಮಾಜಿ ಉಪಾಧ್ಯಕ್ಷ ಎಸ್‌.ದೇವರಾಜು, ಕಾರ್ಯದರ್ಶಿಗಳಾದ ಮಹದೇವು, ಇಂದ್ರಕುಮಾರ್‌, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಬಿ.ಸಿ.ಸಂತೋಷ್‌ಕುಮಾರ್‌, ನಂದೀಶ್‌, ಯುವ ಘಟಕದ ಅಧ್ಯಕ್ಷ ಅನಿಲ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಹೇಮಂತಕುಮಾರ್‌, ವೈರಮುಡಿ, ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.