
BJP ಕಾರ್ಯಕರ್ತರ ಮನವಿ
ಮಂಡ್ಯ: ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದ ಮಾದರಿಯಲ್ಲಿ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ₹5 ಲಕ್ಷ ಪ್ರೋತ್ಸಾಹ ನೀಢುವ ಮೂಲಕ ಯುವ ರೈತರ ಮದುವೆಯನ್ನು ಪ್ರೋತ್ಸಾಹಿಸುವ ಕೆಲಸ ಇನ್ನಾದರೂ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೆಲೆ ಸರ್ಕಾರಿ ಕೆಲಸಕ್ಕೆ ನೇಮಕಾತಿ ಆಗುವುದು ತೀರಾ ವಿಳಂಬವಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಸರ್ಕಾರದ ನೀತಿಯಿಂದಾಗಿ ಖಾಸಗಿ ಕಂಪನಿಗಳು ಕರ್ನಾಟಕಕ್ಕೆ ಉದ್ಯಮ ಸ್ಥಾಪನೆಗಾಗಿ ಬರುತ್ತಿಲ್ಲ ಎಂದು ಆರೋಪಿಸಿದರು.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ, ಸಮರ್ಪಕವಾಗಿ ಬೆಳೆ ಬೆಳೆಯಲು ನೀರು ಇಲ್ಲ. ಕೃಷಿ ನಂಬಿಕೊಂಡಿರುವವರ ಬದುಕು ಮೂರಾ ಬಟ್ಟೆಯಾಗಿದೆ. ಇತ್ತ ಕೃಷಿಯನ್ನು ನಂಬಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದಿರುವ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಇದರಿಂದ ಯುವ ರೈತರಿಗೆ ಬದುಕಿನ ಗ್ಯಾರಂಟಿ ಇಲ್ಲವಾಗಿದೆ ಎಂದು ವಿಷಾದಿಸಿದರು.
ಮುಖಂಡರಾದ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಶಿವಲಿಂಗಯ್ಯ, ಮಾದರಾಜು, ವೈರಮುಡಿ, ಆನಂದ ಕೆಂಪಯ್ಯನದೊಡ್ಡಿ, ನಂದೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.