ADVERTISEMENT

ಮದ್ದೂರು | ಸರ್ವೇ ಮಾಡಿಕೊಡದ ಅಧಿಕಾರಿಗಳು: ರೈತ ಮಹಿಳೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:01 IST
Last Updated 6 ಜನವರಿ 2026, 6:01 IST
ರೈತ ಮಹಿಳೆ ಮರಿಯಮ್ಮ ತಮ್ಮ ಮಗ ನಾಗರಾಜು ಅವರೊಂದಿಗೆ ಮದ್ದೂರಿನ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು 
ರೈತ ಮಹಿಳೆ ಮರಿಯಮ್ಮ ತಮ್ಮ ಮಗ ನಾಗರಾಜು ಅವರೊಂದಿಗೆ ಮದ್ದೂರಿನ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು    

ಮದ್ದೂರು: ತಮಗೆ ಮಂಜೂರಾಗಿದ್ದ ಜಮೀನಿಗೆ ತೆರಳಲು ಹಾಗೂ ವ್ಯವಸಾಯ ಮಾಡಲು ಕೆಲ ಸ್ಥಳೀಯರು ವಿರೋಧ ಮಾಡುತ್ತಿದ್ದಾರೆಂದು ಆರೋಪಿಸಿ ರೈತ ಮಹಿಳೆಯೊಬ್ಬರು ಮಗ ನಾಗರಾಜು ಅವರೊಂದಿಗೆ ನಗರದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ನಾಗರಾಜು ಮಾತನಾಡಿ, ‘ತಾಲ್ಲೂಕಿನ ದುಂಡನಹಳ್ಳಿ ಗ್ರಾಮದಲ್ಲಿ ನಮ್ಮ ತಾತ ಕುಳ್ಳಲಿಂಗೇಗೌಡರ ಮಗ ಕೆಂಪೇಗೌಡ ಅವರಿಗೆ 1980ರಂದು ಬಗರ್ ಹುಕುಂನಲ್ಲಿ ಜಮೀನು ಮಂಜೂರಾಗಿತ್ತು. ಈಗಲೂ 4.35 ಎಕರೆ ಜಮೀನು ನಮಗೆ ಸೇರಿದ್ದರೂ ಜಮೀನಿನ ಅಕ್ಕಪಕ್ಕದಲ್ಲಿರುವ ಕೆಲವರು ನಮ್ಮ ಜಮೀನಿಗೆ ತೆರಳಲು ಹಾಗೂ ಅಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಬಗ್ಗೆ ಎಷ್ಟೋ ಬಾರಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ತಹಶೀಲ್ದಾರ್ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಆದೇಶ ಬಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಜಮೀನಿಗೆ ಹದ್ದುಬಸ್ತು ಮಾಡಿಸಿಕೊಟ್ಟು, ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ‘ಒಂದು ವಾರದೊಳಗೆ ನಿಮ್ಮ ಜಮೀನಿನ ಬಂದು ಅಳತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮಹಿಳೆ ಮರಿಯಮ್ಮ ಪ್ರತಿಭಟನೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.