ADVERTISEMENT

ಮಂಡ್ಯ | ರಸ್ತೆಯಲ್ಲೇ ಒಕ್ಕಣೆ: ವಾಹನ ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 8:47 IST
Last Updated 29 ಜನವರಿ 2024, 8:47 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ಜಿಲ್ಲೆಯ ವಿವಿಧೆಡೆ ರೈತರು ಡಾಂಬರ್‌ ರಸ್ತೆಗಳಲ್ಲೇ ರಾಗಿ, ಭತ್ತ, ಹುರುಳಿ ಒಕ್ಕಣೆ ಮಾಡುತ್ತಿದ್ದು ವಾಹನಗಳಿಗೆ ಬೆಂಕಿ ಅನಾಹುತದ ಆತಂಕ ಸೃಷ್ಟಿಯಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ವಾಹನ ಸವಾರರಿಗೆ ಒಕ್ಕಣೆ ಕಾರ್ಯ ಎದುರಾಗುತ್ತಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅಡಚಣೆಯುಂಟಾಗಿದೆ.

ಸದ್ಯ ಜಿಲ್ಲೆಯಾದ್ಯಂತ ಒಕ್ಕಣೆ ನಡೆಯುತ್ತಿದ್ದು ಬಹುತೇಕ ರೈತರು ಒಕ್ಕಣೆಗೆ ಮುಖ್ಯರಸ್ತೆಗಳನ್ನೇ ಅವಲಂಬಿಸಿದ್ದಾರೆ. ಕಾದು ಬೆಂಕಿಯಂತಾದ ಡಾಂಬರ್‌ ರಸ್ತೆಯ ಮೇಲೆ ವಾಹನಗಳು ಚಲಿಸಿದಾಗ ಪೆಟ್ರೋಲ್‌, ಡೀಸೆಲ್‌ ಸೋರಿಕೆ ಉಂಟಾಗಿ ಬೆಂಕಿ ಅನಾಹುತ ಸಂಭವಿಸುತ್ತಿವೆ. ಹಲವೆಡೆ ಬೈಕ್‌, ಕಾರುಗಳಿಗೆ ಬೆಂಕಿ ಹೊತ್ತಿಕೊಂಡ ಉದಾಹರಣೆಗಳಿವೆ.

ADVERTISEMENT

ರಾಗಿ ಹುಲ್ಲು ಹೆಚ್ಚಾಗಿ ಜಾರುವ ಕಾರಣ ಬೈಕ್‌ಗಳಲ್ಲಿ ಓಡಾಡುವವರು ಜಾರಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಕೆಲವೆಡೆ ರಸ್ತೆಬದಿ ಜಾಗ ಬಿಡದೆ ಪೂರ್ತಿ ರಸ್ತೆಗೆ ಹುಲ್ಲು ಹರಡುವ ಕಾರಣ ವಾಹನ ಸವಾರರು ಅನಿವಾರ್ಯವಾಗಿ ಹುಲ್ಲಿನ ಮೇಲೆಯೇ ಗಾಡಿ ಓಡಿಸಬೇಕಾಗಿದೆ. ಈ ಸಂದರ್ಭದಲ್ಲಿ ವಾಹನ ಸವಾರರು ಜೀವ ಕೈಯಲ್ಲಿಡಿದು ಗಾಡಿ ಓಡಿಸುವಂತಾಗಿದೆ.

ಮಳೆಯಾಶ್ರಿತ ಪ್ರದೇಶವಾಗಿರುವ ನಾಗಮಂಗಲ, ಕೆ.ಆರ್‌.ಪೇಟೆ ಭಾಗದಲ್ಲಿ ರಾಗಿ, ಹುರುಳಿಯ ಒಕ್ಕಣೆ ಹೆಚ್ಚಾಗಿ ನಡೆಯುತ್ತಿದೆ. ಭತ್ತ ಒಕ್ಕಣೆ ಮಾಡುವವರು ಸಾಮಾನ್ಯವಾಗಿ ಯಂತ್ರಕ್ಕೆ ಹಾಕುತ್ತಾರೆ. ಆದರೆ ರಾಗಿ, ಹುರುಳಿ ಬೆಳೆದವರು ಒಕ್ಕಣೆಗಾಗಿ ರಸ್ತೆಯನ್ನೇ ಅವಲಂಬಿಸಿದ್ದಾರೆ. ಕೆಲವರು ಹುಲ್ಲಿನ ಮೇಲೆ ಟ್ರಾಕ್ಟರ್‌ ಓಡಿಸಿಕೊಂಡು ಒಕ್ಕಣೆ ಮಾಡುತ್ತಾರೆ. ಹಲವರು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನೇ ಅವಲಂಬಿಸಿದ್ದಾರೆ.

ನಾಗಮಂಗಲ ತಾಲ್ಲೂಕಿನಲ್ಲಿ ರೈತರು ರಾಗಿ, ಭತ್ತ, ಜೋಳ, ಸಜ್ಜೆ, ಹುರುಳಿ, ಅವರೆ ಬೆಳೆ ಬೆಳೆದಿದ್ದು ಒಕ್ಕಣೆ ಮಾಡಲು ಕಣ ಮಾಡಿಕೊಂಡಿಲ್ಲ. ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳನ್ನೇ ಒಕ್ಕಣೆ ಮಾಡುವ ಕಣಗಳಾಗಿ ಬದಲಾಯಿಸಿಕೊಂಡಿದ್ದಾರೆ.

ಅಲ್ಲದೇ ರಸ್ತೆಯ ಮೇಲೆ ಸಂಪೂರ್ಣವಾಗಿ ಬೆಳೆಗಳನ್ನು ಹರಡುತ್ತಿದ್ದು , ವಾಹನಗಳ ಸಂಚಾರಕ್ಕೆ ಬೇಕಾದ ಜಾಗವೂ ಬಿಡದಂತೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ವಾಹನ ಸಂಚರಿಸುವಾಗ ರಸ್ತೆಯ ತುಂಬಿಲ್ಲಾ ದೂಳು ಮತ್ತು ಬೆಳೆಗಳ ಹೊಟ್ಟು ತುಂಬಿಕೊಂಡು ಓಡಾಡಲು ಅವಕಾಶವಾಗದಂತೆ ಕಣ್ಣಿಗೆ ತುಂಬಿಕೊಳ್ಳುತ್ತದೆ.

ಮಳವಳ್ಳಿ ತಾಲ್ಲೂಕಿನ ಬೋಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಸುತ್ತಮುತ್ತಲಿನ ಕಗ್ಗಲೀಪುರ, ಬಿ.ಜಿ ಪುರ, ಪೂರಿಗಾಲಿ, ಹೊಸಹಳ್ಳಿ ಭಾಗದ ಬಹುತೇಕ ರೈತರು ಒಕ್ಕಣೆ ಕಣ ಇಲ್ಲದ ಪರಿಣಾಮ ಅವರು ಬೆಳೆದ ಹುರುಳಿ, ರಾಗಿ, ಭತ್ತವನ್ನು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ದ್ವಿಚಕ್ರ ವಾಹನ, ಕಾರು, ಬಸ್ ಮುಂತಾದ ವಾಹನ ಸಂಚಾರಕ್ಕೆ ತ್ರೀವ್ರ ಅಡಚಣೆಯಾಗುತ್ತಿದೆ.

ವಾಹನ ಸವಾರರ ಕಣ್ಣುಗಳಿಗೆ ಕಸ, ದೂಳು ಬಿದ್ದು ತೊಂದರೆಯಾಗುತ್ತಿದೆ. ಜತೆಗೆ ಕಾರು, ಬಸ್‌ಗಳ ತಳಭಾಗಕ್ಕೆ ಹುಲ್ಲು ಸುತ್ತಿಕೊಳ್ಳುವುದರಿಂದ ವಾಹನಗಳು ಬೆಂಕಿಯ ಅಪಾಯ ಎದರಿಸುತ್ತಿವೆ. ರಸ್ತೆಯಲ್ಲೇ ರೈತರು ಒಕ್ಕಣೆ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕಿನ ಬಲ್ಲೇನಹಳ್ಳಿ, ಬೂಕನಕೆರೆ, ಪುರ, ಅಗಸರಹಳ್ಳಿ, ಮೋದೂರು, ತೆಂಡೇಕೆರೆ, ಚಿನಕುರಳಿ ಮುಂತಾದ ಭಾಗಗಳಲ್ಲಿ ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದು ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರಮುಖ ರಸ್ತೆಯ ಎಡ ಬಲವನ್ನೂ ಬಿಡದೆ ಹುಲ್ಲು ಹಾಕುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ರೈತರಿಗೆ ತಿಳಿವಳಿಕೆ ಹೇಳುವ ಕೆಲಸ ಮಾಡುತ್ತಿದ್ದಾರೆ. ಆದರೆ ರೈತರು ಯಾರ ಮಾತೂ ಕೇಳದೆ ರಸ್ತೆ ಒಕ್ಕಣೆ ಮುಂದುವರಿಸಿದ್ದಾರೆ.

ಪಾಂಡವಪುರ ತಾಲ್ಲೂಕಿನಲ್ಲಿ ಭತ್ತ ಕಟಾವು ಡಿಸೆಂಬರ್ ಅಂತ್ಯದಲ್ಲಿ ಮುಗಿದಿದ್ದು ಭತ್ತ ಒಕ್ಕಣೆಯನ್ನು ರಸ್ತೆಯಲ್ಲಿಯೇ ಮಾಡಲಾಗಿದೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಅಲ್ಪಸ್ವಲ್ಪ ಮಾತ್ರ ರಾಗಿ ಬೆಳೆ ಬೆಳೆಯಲಾಗಿದೆ. ಸಂಕ್ರಾಂತಿ ಹಬ್ಬದ ಬಳಿಕ ಅಲ್ಲಲ್ಲಿ ರಾಗಿ ಒಕ್ಕಣೆ ಮಾಡಲಾಗಿದೆ. ಜತೆಗೆ ಹುರುಳಿ ಒಕ್ಕಣೆಯು ಅಲ್ಪ ಪ್ರಮಾಣದಲ್ಲಿ ನಡೆದಿದೆ.

ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆ ಭಾಗದ ಕೆಲವು ರಸ್ತೆಗಳಲ್ಲಿ, ಕೊಪ್ಪ ಹೋಬಳಿಯ ಕೊಪ್ಪದಿಂದ ಬೆಕ್ಕಳಲೆ, ಕೌಡ್ಲೆ ಸೇರಿದಂತೆ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭತ್ತ, ರಾಗಿ, ಹುರುಳಿ ಬೆಳೆಗಳನ್ನು ಕಟಾವು ಮಾಡಿ ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಕೆಲವು ಬಾರಿ ರಸ್ತೆ ಅಪಘಾತಗಳು ಸಂಭವಿಸಿ ಬೈಕ್ ಸವಾರರು ಗಾಯಗೊಂಡಿರುವ ಘಟನೆಗಳು ಸಾಮಾನ್ಯವಾಗಿವೆ. ಪೊಲೀಸರು, ತಾಲ್ಲೂಕು ಆಡಳಿತ ಇದನ್ನು ತಪ್ಪಿಸಬೇಕು ಎಂದು ವಾಹನ ಸವಾರರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಬಳಗ: ಎಂ.ಎನ್‌.ಯೋಗೇಶ್‌, ಬಲ್ಲೇನಹಳ್ಳಿ ಮಂಜುನಾಥ್‌, ಉಲ್ಲಾಸ್‌, ಲಿಂಗರಾಜು, ಅಶೋಕ್‌ ಕುಮಾರ್‌, ಹಾರೋಹಳ್ಳಿ ಪ್ರಕಾಶ್‌

ರಸ್ತೆ ಪಾಲಾಗುತ್ತಿದೆ ಧಾನ್ಯ

ರೈತರು ರಸ್ತೆಯ ಮೇಲೆ ಒಕ್ಕಣೆ ಮಾಡುವಾಗ ಅಪಾರ ಪ್ರಮಾಣದ ಧಾನ್ಯ ರಸ್ತೆ ಪಾಲಾಗಿ ವ್ಯರ್ಥವಾಗುತ್ತಿದೆ. ರಾಗಿ, ಹುರುಳಿ ವಾಹನಗಳ ಚಕ್ರಗಳಿಗೆ ಸಿಲುಕಿ ಪೋಲಾಗುತ್ತಿದೆ. ರೈತರು ಕಣಗಣಲ್ಲಿ ಒಕ್ಕಣೆ ಮಾಡುವಾಗ ಕಾಳು ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ರಸ್ತೆಗಳಲ್ಲಿ ಅಪಾರ ಧಾನ್ಯ ಹಾಳಾಗುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಕಣಗಳಲ್ಲಿ ಧಾನ್ಯಗಳು ಉಳಿದಾಗ ಕ್ರಿಮಿ ಕೀಟಗಳಿಗೆ ಆಹಾರವಾಗುತ್ತಿತ್ತು. ಆದರೆ ರಸ್ತೆಯಲ್ಲಿ ಧಾನ್ಯ ಉಳಿದರೆ ಕ್ರಿಮಿ ಕೀಟಗಳಿಗೂ ಸಿಗುತ್ತಿಲ್ಲ. ಧಾನ್ಯ ಪುಡಿಯಾಗಿ ವಾಹನಗಳ ಚಕ್ರಗಳಿಗೆ ಮೆತ್ತಿಕೊಳ್ಳುತ್ತಿದೆ.

ಕಾಳು ಹಾಳಾಗುವ ವಿಷಯ ಗೊತ್ತಿದ್ದರೂ ರೈತರು ಕಣ ಮಾಡುವ ಆಸಕ್ತಿ ತೋರಿಸುತ್ತಿಲ್ಲ. ‘ಕಡಿಮೆ ಪ್ರಮಾಣದಲ್ಲಿ ಬೆಳೆಯುತ್ತಿರುವ ಕಾರಣ ಕಣ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.

ಸಾರ್ವಜನಿಕ ಕಣ ಏನಾದವು?

ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಸಾರ್ವಜನಿಕ ಕಣದಲ್ಲಿ ಒಕ್ಕಣೆ ಮಾಡಲು ರೈತರು ಆಸಕ್ತಿ ತೋರಿಸುತ್ತಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಸಾಮೂಹಿಕ ಕಣ ನಿರ್ಮಿಸಲಾಗಿತ್ತು. ಅವು ಈಗ ದನ ಕೊಟ್ಟಿಗೆಗಳಾಗಿವೆ.

ಸುಲಭ ಎನ್ನುವ ಕಾರಣಕ್ಕೆ ರೈತರು ಒಕ್ಕಣೆಗಾಗಿ ಡಾಂಬರ್‌ ರಸ್ತೆಗಳನ್ನೇ ಬಳಕೆ ಮಾಡುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಣಗಳಲ್ಲಿ ಒಕ್ಕಣೆ ಮಾಡುವ ರೈತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಬ ಒತ್ತಾಯವೂ ಕೇಳಿಬಂದಿದೆ.

‘ರೈತರಲ್ಲಿ ಸಹಕಾರ ಮನೋಭಾವ ಕಡಿಮೆಯಾಗಿದ್ದು ಸಾಮೂಹಿಕ ಕಣಗಳನ್ನು ಬಳಕೆ ಮಾಡುತ್ತಿಲ್ಲ. ರಸ್ತೆಗೆ ಬಂದು ತಮ್ಮ ಮರ್ಯಾದೆ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ವಾಹನ ಸವಾರರೊಬ್ಬರು ಆರೋಪಿಸಿದರು.

ಕಣ ಒಕ್ಕಣೆಯಿಂದ ಸುರಕ್ಷತೆ

ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಜಮೀನಿನಲ್ಲಿಯೇ ಒಕ್ಕಣೆ ಮಾಡಿಕೊಂಡರೆ ಧಾನ್ಯವು ಚೆನ್ನಾಗಿರುತ್ತದೆ, ಇಳುವರಿ ಕೂಡ ಹೆಚ್ಚು ದೊರೆಯುತ್ತದೆ. ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಕೂಡ ಸುರಕ್ಷಿತವಾಗಿರುತ್ತಾರೆ. ರಸ್ತೆಯಲ್ಲಿ ಮಾಡಿದರೆ ವಾಹನ ಸವಾರರು ಅಪಾಯ ಎದುರಿಸುತ್ತಾರೆ. ರೈತರು ಈ ಬಗ್ಗೆ ಅರಿವು ಹೊಂದಿ ರಸ್ತೆ ಒಕ್ಕಣೆ ಬಿಡಬೇಕು.

- ನ.ಲಿ.ಕೃಷ್ಣ, ಮದ್ದೂರು

ಅಲ್ಪಸ್ವಲ್ಪ ಬೆಳೆಗೆ ಕಣ ಏಕೆ?

ಹಿಂದೆ ಮಳೆ, ಬೆಳೆ, ನೀರು ಚೆನ್ನಾಗಿತ್ತು. ಹೊಲಗಳಲ್ಲೇ ಕಣ ಮಾಡಿ ಬೆಳೆಗಳನ್ನು ಒಕ್ಕಣೆ ಮಾಡುತ್ತಿದ್ದೆವು. ಈಗ ಮಳೆ, ನೀರು ಇಲ್ಲದೆ ಅಲ್ಪ ಸಲ್ಪ ಬೆಳೆ ಬೆಳೆಯುತ್ತಿದ್ದೇವೆ. ಕಡಿಮೆ ಪ್ರಮಾಣದ ಬೆಳೆಗೆ ಕಣ ಏಕೆ ಮಾಡಬೇಕು ಎಂಬ ಪ್ರಶ್ನೆ ನಿರ್ಮಾಣವಾಗಿದೆ. ಹೀಗಾಗಿ ಬೆಳೆಗಳನ್ನು ರಸ್ತೆಯಲ್ಲಿ ಒಕ್ಕಣೆ ಮಾಡಿಕೊಳ್ಳುತ್ತೇವೆ

- ನಂದಿಬಸಪ್ಪ, ಮಳವಳ್ಳಿ

ಕಲುಷಿತಗೊಳ್ಳುವ ಧಾನ್ಯ

ರೈತರು ಈ ಹಿಂದೆ ಮಾಡುತ್ತಿದ್ದಂತೆಯೇ ತಮ್ಮ ಜಮೀನುಗಳಲ್ಲಿಯೇ ಕಣ ಮಾಡಿಕೊಂಡು ದವಸ ಧಾನ್ಯಗಳ ಒಕ್ಕಣೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಒಕ್ಕಣೆ ಮಾಡಿದ ದವಸ ಧಾನ್ಯಗಳು ಕಲುಷಿತಗೊಳ್ಳುತ್ತದೆ. ಇಂತಹ ಆಹಾರ ಸೇವನೆಯಿಂದ ಜನರು ಹಲವು ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಒಕ್ಕಣೆ ಮಾಡಿ ವಾಹನ ಸವಾರರಿಗೆ ತೊಂದರೆ ಕೊಡುವುದು ಸರಿಯಲ್ಲ

- ಮೀನಾಕ್ಷಿ ಪುಟ್ಟಮಹಾದೇವು, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.