ADVERTISEMENT

ಮಂಡ್ಯ: ಅಗ್ನಿ ನಂದಿಸಲು ಜಲವಾಹನಗಳ ಕೊರತೆ!

ಜಿಲ್ಲೆಯಲ್ಲಿ ಅಗ್ನಿಕರೆಗಳ ಸಂಖ್ಯೆ ಏರಿಕೆ; ಮೂಲೆ ಸೇರಿದ 10 ಜಲವಾಹನಗಳು

ಸಿದ್ದು ಆರ್.ಜಿ.ಹಳ್ಳಿ
Published 2 ಸೆಪ್ಟೆಂಬರ್ 2025, 2:30 IST
Last Updated 2 ಸೆಪ್ಟೆಂಬರ್ 2025, 2:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಗ್ನಿ ಕರೆಗಳ ಸಂಖ್ಯೆ ಹೆಚ್ಚುತ್ತಿದೆ. ತುರ್ತು ಸೇವೆ ನೀಡಬೇಕಾದ ಅಗ್ನಿಶಾಮಕ ಇಲಾಖೆಯಲ್ಲಿ ಜಲವಾಹನಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಬೆಂಕಿ ನಂದಿಸುವುದು ದೊಡ್ಡ ಸವಾಲಾಗಿದೆ. 

ಜಿಲ್ಲೆಯ 7 ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ಅಗ್ನಿಶಾಮಕ ಠಾಣೆಯಿದೆ. ಈ 7 ಠಾಣೆಗಳಲ್ಲಿ ಪ್ರಸ್ತುತ 7 ಜಲವಾಹನಗಳು ಚಾಲ್ತಿಯಲ್ಲಿವೆ. ಜಿಲ್ಲಾ ಕೇಂದ್ರದಲ್ಲಿ 16 ಸಾವಿರ ಲೀಟರ್‌ ಸಾಮರ್ಥ್ಯದ ವಾಟರ್‌ ಬೌಜರ್‌, ಮದ್ದೂರು ಠಾಣೆಯಲ್ಲಿ 6 ಸಾವಿರ ಲೀಟರ್‌ ಸಾಮರ್ಥ್ಯದ ಜಲವಾಹನವಿದೆ. ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಮತ್ತು ಕೆ.ಆರ್‌.ಪೇಟೆ ಠಾಣೆಯಲ್ಲಿ ತಲಾ 4,500 ಲೀಟರ್‌ ಸಾಮರ್ಥ್ಯದ ಒಂದು ಜಲವಾಹನವಿದೆ.

10 ಜಲವಾಹನಗಳು ಅನುಪಯುಕ್ತ: 

ADVERTISEMENT

15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬುದು ಕೇಂದ್ರ ಸರ್ಕಾರದ ನೀತಿ. ಈ ನಿಯಮದಿಂದಾಗಿ ಮಂಡ್ಯ ಜಿಲ್ಲೆಯಲ್ಲಿ 10 ಜಲವಾಹನಗಳು ಸಂಚಾರವನ್ನು ಸ್ಥಗಿತಗೊಳಿಸಿ, ಮೂಲೆ ಸೇರಿವೆ. ಇದರಿಂದ ಜಲವಾಹನಗಳ ಕೊರತೆಯನ್ನು ಇಲಾಖೆ ಎದುರಿಸುವಂತಾಗಿದೆ. ಪ್ರಸ್ತುತ ಅಗ್ನಿಕರೆಗಳ ಅನುಪಾತಕ್ಕೆ ಅನುಗುಣವಾಗಿ ಕನಿಷ್ಠ 7 ಜಲವಾಹನಗಳು ಇಲಾಖೆಗೆ ಅವಶ್ಯವಿದೆ ಎನ್ನುತ್ತಾರೆ ಅಧಿಕಾರಿಗಳು. 

ಬೇಸಿಗೆ ಸಂದರ್ಭದಲ್ಲಿ ಏಕಕಾಲದಲ್ಲಿ ಮೂರ್ನಾಲ್ಕು ಕಡೆಗಳಿಂದ ಅಗ್ನಿಕರೆಗಳು ಬರುತ್ತವೆ. ಆಗ ತಾಲ್ಲೂಕು ಕೇಂದ್ರದಲ್ಲಿ ಒಂದೊಂದೇ ಜಲವಾಹನ ಇರುವ ಕಾರಣ ತುರ್ತಾಗಿ ಸ್ಥಳಕ್ಕೆ ತೆರಳಿ ಅಗ್ನಿ ನಂದಿಸುವುದು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಜನರಿಂದ ನಾವು ಬೈಗುಳ ಕೇಳಬೇಕಾಗುತ್ತದೆ ಎಂದು ಇಲಾಖೆ ಸಿಬ್ಬಂದಿ ಸಮಸ್ಯೆ ತೋಡಿಕೊಂಡರು. 

190 ಮಂದಿಯ ಜೀವರಕ್ಷಣೆ:

ಮಂಡ್ಯ ಜಿಲ್ಲೆಯಲ್ಲಿ ನದಿ, ಕಾಲುವೆ ಮತ್ತು ನಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಜಲ ದುರಂತಗಳು ಹೆಚ್ಚು ಸಂಭವಿಸುತ್ತಿವೆ. ರಸ್ತೆಬದಿಯಲ್ಲಿ ಇರುವ ನಾಲೆಗಳಿಗೆ, ಚಾಲಕನ ನಿಯಂತ್ರಣ ತಪ್ಪಿದ ಕಾರು ಮತ್ತು ಬೈಕ್‌ಗಳು ಉರುಳಿ ಬೀಳುತ್ತಿವೆ. ನಾಲೆಗಳಿಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. 

ಕಳೆದ ನಾಲ್ಕು ವರ್ಷಗಳಿಂದ ವರ್ಷಕ್ಕೆ ಸರಾಸರಿ 100 ರಕ್ಷಣಾ ಕರೆಗಳು ಇಲಾಖೆಗೆ ಬರುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ 190 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ವಿವಿಧ ಜಲದುರಂತಗಳಲ್ಲಿ 226 ಮಂದಿ ಮೃತಪಟ್ಟಿದ್ದಾರೆ ಎಂಬುದನ್ನು ಅಂಕಿಅಂಶಗಳು ತಿಳಿಸುತ್ತವೆ.  

ಜಿಲ್ಲೆಯಲ್ಲಿ 7 ಜಲವಾಹನಗಳು ಲಭ್ಯವಿದ್ದು ನಮ್ಮ ಸಿಬ್ಬಂದಿ ಶಕ್ತಿಮೀರಿ ಅಗ್ನಿ ನಂದಿಸುತ್ತಿದ್ದಾರೆ. ಹೆಚ್ಚುವರಿ ವಾಹನ ಸೇರ್ಪಡೆಯಾದರೆ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ
ರಾಘವೇಂದ್ರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಡ್ಯ
ತುರ್ತು ಸೇವೆ ನೀಡಬೇಕಾದ ಅಗ್ನಿಶಾಮಕ ಇಲಾಖೆಗೆ ಅಗತ್ಯ ಸಿಬ್ಬಂದಿ ಮತ್ತು ಜಲವಾಹನವನ್ನು ಸರ್ಕಾರ ಕಲ್ಪಿಸಿ ಜನರ ಪ್ರಾಣ ಮತ್ತು ಆಸ್ತಿ ರಕ್ಷಿಸಬೇಕು
ಕಾರ್ತಿಕ್‌ ಸಮಾಜ ಸೇವಕ ನಾಗಮಂಗಲ

6 ಹೊಸ ಅಗ್ನಿಶಾಮಕ ಠಾಣೆಗಳಿಗೆ ಪ್ರಸ್ತಾವ:

ಬೆಳ್ಳೂರು ಕ್ರಾಸ್‌ ಹಲಗೂರು ಕೊಪ್ಪ ಚಿನಕುರಳಿ ತೂಬಿನಕೆರೆ ಸಂತೆಬಾಚಹಳ್ಳಿ ಈ 6 ಸ್ಥಳಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ತೆರೆಯಲು ಕೇಂದ್ರ ಕಚೇರಿಗೆ ಮಂಡ್ಯ ಜಿಲ್ಲೆಯ ಕಚೇರಿಯಿಂದ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ತಿಳಿಸಿದರು.  ಬೆಳ್ಳೂರು ಕ್ರಾಸ್‌ನಲ್ಲಿ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಉಳಿದ ಕಡೆ ಜಾಗ ಹುಡುಕಲಾಗುತ್ತಿದೆ. ಹೋಬಳಿ ಮಟ್ಟದಲ್ಲೂ ಅಗ್ನಿಶಾಮಕ ಠಾಣೆಗಳು ಪ್ರಾರಂಭವಾದರೆ ಅಗ್ನಿ ಅವಘಢಗಳು ಸಂಭವಿಸಿದಾಗ ತುರ್ತಾಗಿ ಘಟನಾ ಸ್ಥಳ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.