
ಮಂಡ್ಯ: ‘ಸುಮಾರು 40 ವರ್ಷಗಳ ಹಿಂದೆ ಭಾರತ ಆಹಾರದ ಕೊರತೆ ಎದುರಿಸುತ್ತಿತ್ತು. ಆದರೆ, ಇಂದು ಬೇರೆ ದೇಶಗಳಿಗೆ ಭಾರತ ಆಹಾರ ರಫ್ತು ಮಾಡುತ್ತಿದೆ. ಆಹಾರದ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ರಾಜ್ಯ ಆಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಆಹಾರ ಸುರಕ್ಷತೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಮೋಹನ್ ಸಿಂಗ್ ಪ್ರಧಾನಿಯಾದ ಸಂದರ್ಭದಲ್ಲಿ ಆಹಾರ ಭದ್ರತೆ ನೀಡುವ ಸಲುವಾಗಿ ಆಹಾರ ಆಯೋಗ ಜಾರಿಗೆ ತಂದರು. ಪ್ರತಿ ವ್ಯಕ್ತಿಗೆ 5 ಕೆ.ಜಿ ಅನ್ನು ವಿತರಿಸುವ ಯೋಜನೆ ಜಾರಿಗೊಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಜನರನ್ನು ಹಸಿವು ಮುಕ್ತರಾಗಿಸಲು ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡಿದರು ಎಂದರು.
ಇವತ್ತಿಗೂ ಆಹಾರ ಸಿಗದೇ ಇರುವ ಜನರು ಇದ್ದಾರೆ. ಕೆಲವರು ಆಹಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಗ್ರಾಹಕರಿಗೆ ಸಂಕಷ್ಟ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಸಾರ್ವಜನಿಕರಿಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಆಹಾರ ಆಯೋಗ ಕ್ರಮ ವಹಿಸುತ್ತಿದೆ. ಜಿಲ್ಲಾಡಳಿತ ಕೂಡ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆನಂದ್ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ ಜೆ., ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ಸತ್ಯಾನಂದ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಸಂಘದ ಅಧ್ಯಕ್ಷ ವಂಸತ್ ಕುಮಾರ್, ನ್ಯಾಷನಲ್ ಲಾ ಕಾಲೇಜಿನ ತರಬೇತಿ ಸಂಯೋಜಕ ಕುಮಾರಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಶಶಿಧರ್ ಇದ್ದರು.
‘ಪಡಿತರದಲ್ಲಿ ಅನ್ಯಾಯವಾದರೆ ದೂರು ಕೊಡಿ’
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಮಾತನಾಡಿ ‘ಕೆಲವು ಕಡೆ ಪಡಿತರ ಚೀಟಿ ರದ್ದಾಗಿದ್ದು ಅದನ್ನ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ಯಾಯವಾದರೆ ಗ್ರಾಹಕರು ದೂರು ನೀಡಬಹುದು. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಮಧ್ಯಾಹ್ನದ ಊಟದಲ್ಲಿ ಕಳಪೆ ಕಂಡು ಬಂದರೆ ಕ್ರಮವಹಿಸಲಾಗುವುದು ಎಂದು ಹೇಳಿದರು. ಅಂಗನವಾಡಿಗಳಲ್ಲಿ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ ಹಾಗೂ ಗರ್ಭಿಣಿಯರಿಗೆ ಸಹಾಯಧನವನ್ನು ನೀಡಲಾಗುತ್ತಿದೆ ಅರ್ಹರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.