ADVERTISEMENT

ಭಾರಿ ಮಳೆ; ಬಾಲಕ, ಜಾನುವಾರು ಸಾವು

ಪಾಂಡವಪುರದ ಕೆನ್ನಾಳು ಗ್ರಾಮದಲ್ಲಿ ಕುಸಿದ ಮನೆ, ಕೋಡಿಬಿದ್ದ ಕೆರೆ; ನೀರು ನುಗ್ಗಿ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 2:36 IST
Last Updated 15 ನವೆಂಬರ್ 2021, 2:36 IST

ಪಾಂಡವಪುರ: ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ತಾ‌ಲ್ಲೂಕಿನ ವಿವಿಧೆಡೆ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ 1ಹಸು, 1ಕರು, 2 ಮೇಕೆಗಳೂ ಸಾವಿಗೀಡಾಗಿವೆ. ಹೊಲಗದ್ದೆಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಕೆನ್ನಾಳು ‌ಗ್ರಾಮದ ಮಂಜುನಾಥ್ ಅವರ ಪುತ್ರ ಗಗನ್ (11) ಮೃತ ಬಾಲಕ. ಗ್ರಾಮದ ಜಯಮ್ಮ ಅವರ ಮನೆ ಕುಸಿದು ಬಿದ್ದಿದೆ. ಕಸಬ ಹೋಬಳಿಯ ಹಿರೇಮರಳಿ ಸೇರಿದಂತೆ ವಿವಿಧೆಡೆ 13 ಮನೆಗಳು, ಮೇಲುಕೋಟೆ ಹೋಬಳಿಯಲ್ಲಿ 6 ಮನೆಗಳು ಹಾಗೂ ಚಿನಕುರಳಿ ಹೋಬಳಿಯ ಲಿಂಗಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 49 ಮನೆಗಳು ಕುಸಿದಿವೆ. ತಾಲ್ಲೂಕಿನಾದ್ಯಂತ ಒಟ್ಟು 78 ಮನೆಗಳು ಕುಸಿದಿದ್ದು, ₹ 75ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನ ವಿವಿಧೆಡೆ ಸುಮಾರು 117 ಎಕರೆ ಬೆಳೆ ನಾಶವಾಗಿದ್ದು,₹ 33ಲಕ್ಷ ನಷ್ಟ ಉಂಟಾಗಿದೆ. ಜತೆಗೆ ₹ 5ಲಕ್ಷದಷ್ಟು ಇತರ ಸ್ವತ್ತುಗಳಿಗೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ADVERTISEMENT

ವಿದ್ಯುತ್ ಕಂಬಗಳು, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಳಾಗಿದ್ದು, ಸುಮಾರು ₹ 4ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಸೆಸ್ಕ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ಒಡೆದ ಕೆರೆ ಕೋಡಿ: ತಾ‌ಲ್ಲೂಕಿನ ಎಲ್ಲ ಕೆರೆಕೋಡಿಗಳು ತುಂಬಿ ಹರಿಯುತ್ತಿವೆ. ತೊಣ್ಣೂರು ಕೆರೆ, ಹಿರೋಡೆ ಕೆರೆಗಳ ಕೋಡಿ ಬಿದ್ದಿದ್ದು, ನೀರು ಹರಿದು ಹೋಗುತ್ತಿದೆ. ತೊಣ್ಣೂರು ಕೆರೆಕೋಡಿ ಬಿದ್ದಿದ್ದು, ನೀರು ಗದ್ದೆಗಳಿಗೆ ನುಗ್ಗಿ ಬೆಳೆ ನಾಶವಾಗಿದೆ.

ಜಿಲ್ಲಾಧಿಕಾರಿ ಭೇಟಿ; ಪರಿಹಾರ ವಿತರಣೆ: ಕೆನ್ನಾಳು ‌ಗ್ರಾಮದಲ್ಲಿ ಮನೆ ಕುಸಿದು ಮೃತಪಟ್ಟ ಬಾಲಕ ಗಗನ್ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಶ್ವತಿ, ಬಾಲಕನ ತಂದೆ ಮಂಜುನಾಥ್, ತಾಯಿ ಲತಾ ಅವರಿಗೆ ಪರಿಹಾರದ ₹ 4ಲಕ್ಷ ಮೌಲ್ಯದ ಚೆಕ್ ನೀಡಿ ಸಾಂತ್ವನ ಹೇಳಿದರು. ಮನೆ ಕುಸಿದು ಬಿದ್ದು ನಷ್ಟ ಉಂಟಾಗಿದ್ದ ಮನೆ ಪರಿಹಾರವಾಗಿ ₹ 90ಸಾವಿರ ಹಾಗೂ ಮೃತಪಟ್ಟ ಜಾನುವಾರುಗಳಿಗೆ ಸಂಬಂಧಿಸಿ ₹ 56ಸಾವಿರ ಪರಿಹಾರದ ಚೆಕ್‌ ಅನ್ನು ಮನೆ ಕಳೆದುಕೊಂಡಿದ್ದ ಜಯಮ್ಮ ಅವರಿಗೆ ವಿತರಿಸಿದರು.

ಹಾನಿಗೊಳಗಾಗಿರುವ ಕುಟುಂಬದ ವರಿಗೆ ಕೂಡಲೇ ಪರಿಹಾರ ನೀಡುವುದಾಗಿ ತಿಳಿಸಿದರು.

ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಅಧಿಕಾರಿಗಳು ಹಾಜರಿದ್ದರು.

ಶಾಸಕ ಭೇಟಿ: ಬಾಲಕ ಗಗನ್ ಮನೆಗೆ ಭೇಟಿ ನೀಡಿದ ಶಾಸಕ ಸಿ.ಎಸ್.ಪುಟ್ಟ ರಾಜು ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾಲ್ಲೂಕಿನ ಹಾನಿಗೊಳಗಾಗಿರುವ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.