ADVERTISEMENT

ನಾಗಮಂಗಲ | ಹೇಮಾವತಿಯಿಂದ ಕೆರೆ, ಕಟ್ಟೆಗಳಿಗೆ ನೀರು: ಎನ್‌.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 7:02 IST
Last Updated 11 ಸೆಪ್ಟೆಂಬರ್ 2025, 7:02 IST
ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಕೆರೆಯಿಂದ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡಿದರು
ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಕೆರೆಯಿಂದ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡಿದರು   

ನಾಗಮಂಗಲ: ನನ್ನ ಕ್ಷೇತ್ರದ ಗ್ರಾಮಗಳು, ಹೇಮಾವತಿ ನದಿ ನೀರಿನಿಂದ ವಂಚಿತರಾಗಿರುವ ಪ್ರದೇಶಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ಹರಿಸಿ ಈ ಭಾಗದ ಕೆರೆ ಕಟ್ಟೆ ತುಂಬಿಸಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಹೆರಗನಹಳ್ಳಿ ಕೆರೆಯಿಂದ ₹9.9 ಕೋಟಿ ವೆಚ್ಚದ ಏತ ನೀರಾವರಿ ಮೂಲಕ ಕದಬಹಳ್ಳಿ ಗ್ರಾಮದ ಎರಡು ಕೆರೆಗಳು ಹಾಗೂ ಏಳು ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯಾವ ಗ್ರಾಮಕ್ಕೂ ಹೇಮಾವತಿ ನೀರು ಸಿಗಲಿಲ್ಲ ಎಂಬುವ ಮಾತು ಬರಬಾರದು, ಹಾಗಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆಯನ್ನು ₹330 ಕೋಟಿ ಅಂದಾಜಿನಲ್ಲಿ ಕೈಗೆತ್ತಿಕೊಂಡಿದ್ದು, ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳಿಗೆ ನೀರು ಹರಿಸಲಾಗುವುದು. ಇನ್ನೆರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ADVERTISEMENT

ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಲು ಬದ್ಧನಾಗಿದ್ದೇನೆ. ಹಂತ ಹಂತವಾಗಿ ಆದ್ಯತೆಯ ಮೇರೆ ರಸ್ತೆ ದುರಸ್ತಿ ಮಾಡಲಾಗುವುದು. ಕದಬಹಳ್ಳಿ ಕಾವೇಟಿ ರಂಗನಾಥ ಸ್ವಾಮಿಯ ಸಮುದಾಯ ಭವನದ ಕಾಮಗಾರಿ ಬಹು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಭವನವನ್ನು ಪೂರ್ಣಗೊಳಿಸಲು ವಿಶೇಷ ಕಾಳಜಿ ವಹಿಸಿದ್ದೇನೆ ಎಂದು ತಿಳಿಸಿದರು.

ಮನ್‌ಮುಲ್ ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸಿಲ್ದಾರ್ ಆದರ್ಶ್, ಮುಖಂಡರಾದ ಎನ್.ಜೆ.ರಾಜೇಶ್, ವೆಂಕಟೇಶ್, ಎನ್.ಟಿ.ಕೃಷ್ಣಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.