ಮಳವಳ್ಳಿ: ತಾಲ್ಲೂಕಿನಲ್ಲಿ ನಡೆದಿರುವ ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ತನಿಖೆಯ ವೇಳೆ ಸಾಕ್ಷ್ಯನಾಶ ಹಾಗೂ ಹಸ್ತಕ್ಷೇಪ ಸಾಧ್ಯತೆ ಇರುವುದರಿಂದ ತಾಲ್ಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರ್ ಹಾಗೂ ನಾಲ್ವರು ಸಿಬ್ಬಂದಿಯ ವರ್ಗಾವಣೆಗೆ ರಾಜ್ಯಪಾಲರ ಆದೇಶಾನುಸಾರ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ (ಪ್ರ) ಟಿ.ರಾಘವೇಂದ್ರ ಸೂಚಿಸಿದ್ದಾರೆ.
ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಗೋಮಾಳ, ಹುಲ್ಲುಬನ್ನಿ, ಗುಂಡುತೋಪು ಸೇರಿದಂತೆ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಪಾಲಾದ ಪ್ರಕರಣದ ಸಮಗ್ರ ತನಿಖೆಗೆ 2024ರ ಜುಲೈ 26ರಂದು ಕಂದಾಯ ಆಯುಕ್ತಾಲಯದ ವಿಶೇಷ ಜಿಲ್ಲಾಧಿಕಾರಿ ಸಂಗಪ್ಪ ನೇತೃತ್ವದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ತಂಡವನ್ನು ನೇಮಿಸಲಾಗಿತ್ತು.
ಕಳೆದ 5 ವರ್ಷಗಳಲ್ಲಿ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾತೆ/ ಪಹಣಿ ಸೃಷ್ಟಿಸಿ ಅಕ್ರಮ ಎಸಗಿರುವುದು ತನಿಖಾ ತಂಡಕ್ಕೆ ಕಂಡುಬಂದಿದೆ. ಭಾಗಿಯಾಗಿರುವ ಗ್ರೇಡ್-2 ತಹಶೀಲ್ದಾರ್ ಬಿ.ವಿ. ಕುಮಾರ್ ಹಾಗೂ ತಾಲ್ಲೂಕು ಕಚೇರಿಯಲ್ಲಿ ಗ್ರೂಪ್-ಸಿ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೇದಾರ್ ಎಚ್.ಎಂ. ಅಶೋಕ್ ಕುಮಾರ್, ಹಿಂದೆ ಅಮಾನತುಗೊಂಡು ಪ್ರಸ್ತುತ ಪಾಂಡವಪುರ ತಾಲ್ಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಜಿ.ಎಂ. ಪ್ರಕಾಶ್, ಮಳವಳ್ಳಿ ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸು ವರದಿಯನ್ನು ಸಲ್ಲಿಸಿರುತ್ತಾರೆ.
ಗ್ರೇಡ್-2 ತಹಶೀಲ್ದಾರ್ ಬಿ.ವಿ. ಕುಮಾರ್ ಮಳವಳ್ಳಿ ತಾಲ್ಲೂಕಿನ ವ್ಯಾಪ್ತಿಯ ವಿವಿಧ ಗೋಮಾಳ ಜಮೀನು ಹುಲ್ಲುಬನ್ನಿ ಗುಂಡುತೋಪು ಹಾಗೂ ಹಲವಾರು ಜಮೀನುಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ/ ಪಹಣಿ ಸೃಷ್ಟಿಸಿ ವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರವು ಪ್ರಸ್ತಾಪಿಸಿದ್ದು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರಿದರೆ ಸಾಕ್ಷ್ಯ ನಾಶ ಹಾಗೂ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇರುವುದರಿಂದ ಅವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಕ್ಕೆ ಹಿಂಪಡೆಯಲಾಗಿದೆ. ಈಗಾಗಲೇ ಬಿ.ವಿ. ಕುಮಾರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ತನಿಖಾ ತಂಡ ಈಗಾಗಲೇ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯ ಆಧಾರದ ಮೇಲೆ ಗ್ರೇಡ್ -2 ತಹಶೀಲ್ದಾರ್ ಸೇರಿದಂತೆ ಐವರ ವರ್ಗಾವಣೆಗೆ ಆದೇಶವಾಗಿದೆ. ಇತರ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆಕುಮಾರ ಜಿಲ್ಲಾಧಿಕಾರಿ ಮಂಡ್ಯ
ಕಳೆದ ವರ್ಷ ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿ 24 ಎಕರೆ ಸರ್ಕಾರಿ ಭೂಮಿಯನ್ನು ಕೆಲವರಿಗೆ ಅಕ್ರಮವಾಗಿ ಪರಭಾರೆ ಮಾಡಿರುವುದು ಬೆಳಕಿಗೆ ಬಂದ ನಂತರ ಸದನದಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಅವರ ಮನವಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಂದಿಸಿದ್ದರು. ಪ್ರಕರಣದ ಸಂಬಂಧ ಅಂದಿನ ತಹಶೀಲ್ದಾರ್ ಕೆ.ಎನ್. ಲೋಕೇಶ್ ಅವರು ತಾಲ್ಲೂಕು ಕಚೇರಿಯ ಅಂದಿನ ಎಫ್‌ಡಿಎ ಹಾಗೂ ಶೀರಸ್ತೇದಾರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವು ತನಿಖಾ ಹಂತದಲ್ಲಿದೆ. 2023ರ ವಿಧಾನಸಭಾ ಚುನಾವಣೆಯ ವೇಳೆ ಅಕ್ರಮ ಭೂ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಬೊಪ್ಪೇಗೌಡನಪುರ (ಬಿ.ಜಿ.ಪುರ) ಹೋಬಳಿಯ ಕೆಲವೆಡೆ ರಾಜಕೀಯ ಪಕ್ಷಗಳ ಹಿಂಬಾಲಕರು ಅರಣ್ಯ ಭೂಮಿ ಹಾಗೂ ಗೋಮಾಳವನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದರ ಬಗ್ಗೆ ‘ಪ್ರಜಾವಾಣಿ’ ಹಲವು ವರದಿಗಳನ್ನು ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.