ADVERTISEMENT

ಮತ್ತೆ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಕೆಎಎಸ್‌ ಅಧಿಕಾರಿ ನಾಗರಾಜು?

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 15:39 IST
Last Updated 2 ಡಿಸೆಂಬರ್ 2024, 15:39 IST
ಎಚ್‌.ಎಲ್‌. ನಾಗರಾಜು
ಎಚ್‌.ಎಲ್‌. ನಾಗರಾಜು   

ಮಂಡ್ಯ: ಕೆಎಎಸ್‌ (ಹಿರಿಯ ಶ್ರೇಣಿ) ಅಧಿಕಾರಿ ಎಚ್‌.ಎಲ್‌.ನಾಗರಾಜು ಅವರು ಸರ್ಕಾರಿ ಹುದ್ದೆ ತೊರೆದು ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪ್ರಸ್ತುತ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, 2–3 ದಿನಗಳಲ್ಲಿ ‘ದೀರ್ಘ ರಜೆ’ ಮೇಲೆ ಹೋಗಲಿದ್ದಾರೆ. ಆ ನಂತರ ಸ್ವಯಂ ನಿವೃತ್ತಿ ಪಡೆದು, ಸ್ವಾಮೀಜಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಕೆಲವು ವರ್ಷಗಳಿಂದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದ ಸ್ವಾಮೀಜಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ADVERTISEMENT

ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದವರು. ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಮಂಡ್ಯ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.  

ನಿಶ್ಚಲಾನಂದನಾಥ ಸ್ವಾಮೀಜಿ:

2011ರಲ್ಲಿ ಕೆ.ಆರ್‌.ಪೇಟೆ ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ, ಕೆಲಸಕ್ಕೆ ರಾಜೀನಾಮೆ ನೀಡಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸತ್ವ ದೀಕ್ಷೆ ಪಡೆದು, ‘ನಿಶ್ಚಲಾನಂದನಾಥ’ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಆಗ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ರಾಜೀನಾಮೆ ನೀಡಬಾರದು ಎಂದು ಹಿತೈಷಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಪುನಃ ಸರ್ಕಾರಿ ಕೆಲಸಕ್ಕೆ ಹಾಜರಾಗಿದ್ದರು. 

ಈಗ ಮತ್ತೆ ಸುದ್ದಿಯಲ್ಲಿದ್ದು, ‘ಕುಮಾರ ಚಂದ್ರಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ದೀಕ್ಷೆ ಪಡೆಯಲಿದ್ದಾರೆ. ದೀಕ್ಷೆ ಪಡೆಯುವ ಸಂದರ್ಭದಲ್ಲಿ ಐದು ದಿನ ಪಟ್ಟಾಭಿಷೇಕದ ಕಾರ್ಯಕ್ರಮಗಳು ನಡೆಯಲಿವೆ’ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆಗೆ ‘ಪ್ರಜಾವಾಣಿ’ ಪ್ರಯತ್ನಿಸಿತಾದರೂ ಅವರು ಲಭ್ಯವಾಗಲಿಲ್ಲ. 

ವೈಯಕ್ತಿಕ ವಿಚಾರ: ಸಚಿವ

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎನ್. ಚಲುವರಾಯಸ್ವಾಮಿ, ‘ಈ ಬಗ್ಗೆ ಮಾಹಿತಿ ಬಂದಿದೆ. ಇನ್ನೆರಡು ಮೂರು ದಿನಗಳಲ್ಲಿ ರಜೆ ತೆಗೆದುಕೊಳ್ಳಲಿದ್ದಾರೆ. ಆ ನಂತರ ‘ವಿಆರ್‌ಎಸ್‌’ ತೆಗೆದುಕೊಳ್ಳುವ ಪ್ರಕ್ರಿಯೆ ಕೈಗೊಳ್ಳಬಹುದು. ಇದು ಅವರ ವೈಯಕ್ತಿಕ ವಿಚಾರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.