ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ‘ಬೃಂದಾವನ’ ಉದ್ಯಾನದ ಪ್ರವೇಶ ಶುಲ್ಕವನ್ನು ಮೇ 1ರಿಂದ ಎರಡು ಪಟ್ಟು ಹೆಚ್ಚಿಸಲಾಗಿದ್ದು, ಪ್ರವಾಸಿಗರಿಗೆ ದುಬಾರಿಯಾಗಿ ಪರಿಣಮಿಸಿದೆ.
ಕಾವೇರಿ ನೀರಾವರಿ ನಿಗಮದಿಂದ ಬೃಂದಾವನ ಪ್ರವೇಶದ್ವಾರದ ದರ, ವಾಹನ ಪಾರ್ಕಿಂಗ್ ಹಾಗೂ ಬೃಂದಾವನ ಮುಖ್ಯರಸ್ತೆ ಮೇಲ್ಸೇತುವೆ ಟೋಲ್ ಸಂಗ್ರಹಿಸಲು ಟೆಂಡರ್ ಕರೆಯಲಾಗಿತ್ತು. ಕರ್ನಾಟಕ ಕಮರ್ಷಿಯಲ್ ಆ್ಯಂಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ (ಕೆಸಿಐಸಿ) 3 ವರ್ಷಗಳಿಗೆ ಗುತ್ತಿಗೆ ಪಡೆದಿದೆ.
ಆರು ವರ್ಷ ಮೇಲ್ಪಟ್ಟ ಪ್ರವಾಸಿಗರಿಗೆ ₹50ರಿಂದ ₹100, 3ರಿಂದ 6 ವರ್ಷದವರಿಗೆ ₹10ರಿಂದ ₹50ಕ್ಕೆ ಪ್ರವೇಶ ದರವನ್ನು ಹೆಚ್ಚಳ ಮಾಡಲಾಗಿದೆ. ಶಾಲಾ ಮಕ್ಕಳಿಗೆ ₹5, ಕ್ಯಾಮೆರಾಗೆ ₹100 ಶುಲ್ಕ ನಿಗದಿಪಡಿಸಲಾಗಿದೆ.
ದ್ವಿಚಕ್ರವಾಹನಕ್ಕೆ ₹10ರಿಂದ ₹20, ತ್ರಿಚಕ್ರವಾಹನಕ್ಕೆ ₹40ರಿಂದ ₹50, ನಾಲ್ಕುಚಕ್ರಗಳ (ಕಾರು, ಜೀಪು) ವಾಹನಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್ ಮತ್ತು ಮಿನಿ ಬಸ್‌ಗಳಿಗೆ ₹70ರಿಂದ ₹100 ಹಾಗೂ ಬಸ್‌ಗಳಿಗೆ ₹100ರಿಂದ ₹200 ಪಾರ್ಕಿಂಗ್ ದರವನ್ನು ಹೆಚ್ಚಿಸಿರುವುದಕ್ಕೆ ಪ್ರವಾಸಿಗರಾದ ಶಿವಮೊಗ್ಗದ ಕಾರ್ತಿಕ್, ಮುರಳೀಧರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೃಂದಾವನ ಮೇಲ್ಸೇತುವೆ ಟೋಲ್ ದರವನ್ನು ತ್ರಿಚಕ್ರ ವಾಹನಗಳಿಗೆ ₹20ರಿಂದ ₹50, ಕಾರು, ಜೀಪುಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್, ಮಿನಿ ಬಸ್‌ಗಳಿಗೆ ₹50ರಿಂದ ₹100, ಬಸ್‌ಗೆ ₹100ರಿಂದ ₹200, ಆರು ಚಕ್ರಗಳ ವಾಹನಕ್ಕೆ ₹150ರಿಂದ ₹200 ಹಾಗೂ ಹತ್ತು ಚಕ್ರಗಳ ಲಾರಿಗೆ ₹200ರಿಂದ ₹300ಕ್ಕೆ ಶುಲ್ಕವನ್ನು ಹೆಚ್ಚಿಸಿರುವುದು ಚಾಲಕರ ಬೇಸರಕ್ಕೆ ಕಾರಣವಾಗಿದೆ.
ವಾರ್ಷಿಕ ₹5 ಕೋಟಿ ಸಂಗ್ರಹ: ಕೆಆರ್‌ಎಸ್ ಅಣೆಕಟ್ಟೆ ತಳಭಾಗದಲ್ಲಿರುವ ಬೃಂದಾವನವು ವರ್ಣರಂಜಿತ ಹೂವುಗಳು, ಕಣ್ಣು ಕೋರೈಸುವ ದೀಪಾಲಂಕಾರ, ಸಂಗೀತ ಕಾರಂಜಿ, ಬೋಟಿಂಗ್ ಆಕರ್ಷಣೆಗಳನ್ನು ಒಳಗೊಂಡಿದೆ. ಈ ಸುಂದರ ಸಸ್ಯೋದ್ಯಾನವನ್ನು ಕಣ್ತುಂಬಿಕೊಳ್ಳಲು ದೇಶ–ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರ್ಷಿಕವಾಗಿ ಪ್ರವೇಶ ಶುಲ್ಕದಿಂದ ಸರಾಸರಿ ₹5 ಕೋಟಿ ಮತ್ತು ವಾಹನ ಪಾರ್ಕಿಂಗ್‌ನಿಂದ ಸರಾಸರಿ ₹75 ಲಕ್ಷ ಸಂಗ್ರಹವಾಗುತ್ತಿದೆ.
2021–22ನೇ ಸಾಲಿನಲ್ಲಿ ₹2.75 ಕೋಟಿ, 2022–23ನೇ ಸಾಲಿನಲ್ಲಿ ₹3.05 ಕೋಟಿ ಹಾಗೂ 2023–24ನೇ ಸಾಲಿನಲ್ಲಿ ₹3.66 ಕೋಟಿ ವಾರ್ಷಿಕ ನಿರ್ವಹಣಾ ವೆಚ್ಚ ತಗುಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ಆರು ವರ್ಷಗಳ ನಂತರ ಪರಿಷ್ಕರಣೆ 3 ವರ್ಷಗಳಿಗೆ ಗುತ್ತಿಗೆ
ಕೆಆರ್‌ಎಸ್ ಬೃಂದಾವನ ಪ್ರವೇಶ ಶುಲ್ಕವು ಆರು ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ. ಈಗ ಹೊಸ ಟೆಂಡರ್ ಪ್ರಕಾರ ದರ ಏರಿಕೆ ಮಾಡಲಾಗಿದೆಫಾರೂಕ್ ಅಹಮದ್ ಅಬು ಎಇಇ ಕಾವೇರಿ ನೀರಾವರಿ ನಿಗಮ
ಬೃಂದಾವನ ಪ್ರವೇಶ ದರ ವಾಹನ ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಮಾಡಿ ಪ್ರವಾಸಿಗರಿಗೆ ಬರೆ ಹಾಕಿದ್ದಾರೆ. ಜಿಲ್ಲಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆಎಂ.ಬಿ. ನಾಗಣ್ಣಗೌಡ ಮುಖಂಡ ಕರುನಾಡು ಸೇವಕರ ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.