ADVERTISEMENT

ಚಲುವರಾಯಸ್ವಾಮಿ ವಿರುದ್ಧ ಪತ್ರ ಬರೆದಿಟ್ಟು ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ

ಆರೋಪ ನಿರಾಕರಿಸಿದ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 9:27 IST
Last Updated 6 ಜುಲೈ 2023, 9:27 IST
ಚಾಲಕ ಜಗದೀಶ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್
ಚಾಲಕ ಜಗದೀಶ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್   

ನಾಗಮಂಗಲ (ಮಂಡ್ಯ ಜಿಲ್ಲೆ): ಮದ್ದೂರು ಡಿಪೋಗೆ ವರ್ಗಾಯಿಸಿದ್ದರಿಂದ ಬೇಸರಗೊಂಡ ಇಲ್ಲಿನ ಸಾರಿಗೆ ಸಂಸ್ಥೆ ಬಸ್‌ ಚಾಲಕ ಎಚ್.ಆರ್.ಜಗದೀಶ್ ಅವರು ಪಟ್ಟಣದ ಬಸ್‌ ಡಿಪೊ ಎದುರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ‘ವರ್ಗಾವಣೆಗೆ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕಾರಣ’ ಎಂದು ಅವರು ಡೆತ್‌ ನೋಟ್‌ ಬರೆದಿದ್ದಾರೆ.

ಅವರನ್ನು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

‘ನನ್ನ ವರ್ಗಾವಣೆಗೆ ಸಚಿವ ಎನ್.ಚಲುವರಾಯಸ್ವಾಮಿ ಅವರೇ ಕಾರಣ. ರಾಜಕೀಯ ದ್ವೇಷದಿಂದ ಒತ್ತಡ ತಂದು ನನ್ನನ್ನು ವರ್ಗಾವಣೆ ಮಾಡಿಸಿದ್ದಾರೆ. ಆದರೆ, ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣ ನೀಡಿ ಅಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ. ನಾನು ಯಾರೊಂದಿಗೂ ಅನುಚಿತವಾಗಿ ವರ್ತಿಸಿಲ್ಲ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಚಲುವರಾಯಸ್ವಾಮಿ ಅವರು ವರ್ಗಾವಣೆ ಮಾಡಿಸಿದ್ದಾರೆ‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

‘ವರ್ಗಾವಣೆಗೆ ಒತ್ತಡ ಹಾಕಿಲ್ಲ. ವಾರದ ಹಿಂದೆ ಆತನ ವಿರುದ್ಧ ಅನುಚಿತ ವರ್ತನೆಯ ದೂರು ಬಂದಿತ್ತು,  ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದಿದ್ದೆ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದೆ‘ ಎಂದು ಸಚಿವ ಎನ್.ಚಲುವರಾಯಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಲಕ ಜಗದೀಶ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್
ನಾಗಮಂಗಲ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವರ್ಗಾವಣೆ ವಿಚಾರವಾಗಿ ವಿಷ ಸೇವಿಸಿದ ಚಾಲಕ ಜಗದೀಶ್‌ಗೆ ಪ್ರಥಮ ಚಿಕಿತ್ಸೆ ನೀಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.