ADVERTISEMENT

ಮಂಡ್ಯ | ಅಕ್ರಮ ಆಸ್ತಿ ನೋಂದಣಿ: ಸರ್ಕಾರಕ್ಕೆ ₹17.70 ಲಕ್ಷ ನಷ್ಟ

ಶ್ರೀರಂಗಪಟ್ಟಣ ಉಪನೋಂದಣಾಧಿಕಾರಿ ವಿರುದ್ಧ ತನಿಖಾ ವರದಿ ಸಲ್ಲಿಕೆ

ಸಿದ್ದು ಆರ್.ಜಿ.ಹಳ್ಳಿ
Published 1 ಡಿಸೆಂಬರ್ 2024, 4:15 IST
Last Updated 1 ಡಿಸೆಂಬರ್ 2024, 4:15 IST
<div class="paragraphs"><p>ಉಪನೋಂದಣಾಧಿಕಾರಿ&nbsp;ಜಿ.ಮಂಜುದರ್ಶಿನಿ ಮತ್ತು&nbsp;ಜಿಲ್ಲಾಧಿಕಾರಿ ಕುಮಾರ</p></div>

ಉಪನೋಂದಣಾಧಿಕಾರಿ ಜಿ.ಮಂಜುದರ್ಶಿನಿ ಮತ್ತು ಜಿಲ್ಲಾಧಿಕಾರಿ ಕುಮಾರ

   

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಉಪನೋಂದಣಾಧಿಕಾರಿ ಜಿ.ಮಂಜುದರ್ಶಿನಿ ಅವರು ‘ಅಕ್ರಮ ಆಸ್ತಿ ನೋಂದಣಿ’ ಮಾಡಿ ಸರ್ಕಾರದ ಬೊಕ್ಕಸಕ್ಕೆ ₹17.70 ಲಕ್ಷ ನಷ್ಟ ಉಂಟು ಮಾಡಿದ್ದಾರೆ ಎಂಬುದು ತನಿಖಾ ವರದಿಯಲ್ಲಿ ಸಾಬೀತಾಗಿದೆ. 

ದಸ್ತಾವೇಜುಗಳ ನೋಂದಣಿಯಲ್ಲಿ ಕ್ರಮಬದ್ಧವಲ್ಲದ ನೋಂದಣಿ ಮಾಡಿದ್ದಾರೆ ಹಾಗೂ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ ಕಡಿಮೆ ಪಡೆದಿರುವುದು ಕರ್ತವ್ಯಲೋಪ ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ. ಈ ತನಿಖಾ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

ಏನಿದು ದೂರು?: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ (ಕೆ.ಆರ್‌.ಎಸ್‌) ಗ್ರಾಮದ ಸ.ನಂ. 6/1, ಹೊಸಹಳ್ಳಿ ಗ್ರಾಮದ ಸ.ನಂ. 60/1, 60/8, ಶ್ರೀರಂಗಪಟ್ಟಣ ಟೌನ್‌ ಮುನ್ಸಿಪಲ್‌ ಸ್ವತ್ತಿನ ಸಂಖ್ಯೆ 18–505–136, ಎಸ್‌– 14–21–12 ಹಾಗೂ 12–10–73 ಇವುಗಳಿಗೆ ಸಂಬಂಧಿಸಿ ಅಧಿಕಾರಿಯು ಆಸ್ತಿಗಳ ಅಕ್ರಮ ನೋಂದಣಿ ಮಾಡಿದ್ದಾರೆ’ ಎಂದು ಮಂಡ್ಯ ತಾಲ್ಲೂಕು ತೂಬಿನಕೆರೆಯ ಟಿ.ಎಲ್‌. ಶ್ರೀಧರ್‌ ಎಂಬುವರು ಜೂನ್‌ 21ರಂದು ದೂರು ನೀಡಿದ್ದರು.

ತನಿಖಾ ತಂಡ ರಚನೆ: ದೂರಿನ ಮೇರೆಗೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯು ತನಿಖಾ ತಂಡ ರಚಿಸಿದ್ದರು. ತಂಡವು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಿದೆ. 3 ಪ್ರಕರಣಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಮೊದಲನೇ ಪ್ರಕರಣದಲ್ಲಿ, ಮಾಲೀಕತ್ವಕ್ಕೆ ಸಂಬಂಧಿಸಿ ಆರ್‌ಟಿಸಿ ಕಾಲಂ 9ರಲ್ಲಿ ‘ಮನೆಜಾಗ’ ಎಂದು ನಮೂದಾಗಿದ್ದರೂ ದಾಖಲೆಗಳನ್ನು ಪರಿಶೀಲಿಸದೆ, ದಸ್ತಾವೇಜು ನೋಂದಣಿಗೆ ಸಂಬಂಧಿಸಿ ನೀಡಲಾದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಮಾರ್ಗಸೂಚಿ ಬೆಲೆಗಿಂತ ಕಡಿಮೆ ಮೌಲ್ಯವನ್ನು ನಮೂದಿಸಿ ₹12.09 ಲಕ್ಷ ರಾಜಸ್ವ ನಷ್ಟ ಉಂಟು ಮಾಡಿದ್ದಾರೆ ಎಂದು ತಿಳಿಸಲಾಗಿದೆ. 

ಎರಡನೇ ಪ್ರಕರಣದಲ್ಲಿ, ಜಂಟಿ ಮಾಲೀಕತ್ವದ ಆಸ್ತಿಯನ್ನು ಕ್ರಯ ಮಾಡುವಾಗ, ಸೂಕ್ತ ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ಪರಿಶೀಲಿಸದೆ ನೋಂದಣಿ ಮಾಡಲಾಗಿದೆ. ಕರಾರಿನ ಮೌಲ್ಯಕ್ಕಿಂತ ಕಡಿಮೆ ಮೊತ್ತ ನಮೂದಿಸಿ ₹3.24 ಲಕ್ಷ ರಾಜಸ್ವ ನಷ್ಟ ಉಂಟು ಮಾಡಿದ್ದಾರೆ. ಮೂರನೇ ಪ್ರಕರಣದಲ್ಲಿ, ಕ್ರಯದ ಕರಾರು ಮೌಲ್ಯಕ್ಕನುಗುಣವಾಗಿ ಕ್ರಯ ನೋಂದಣಿ ಮಾಡುವಾಗ, ಕಡಿಮೆ ಮೊತ್ತ ನಮೂದಿಸಿ ₹2.37 ಲಕ್ಷ ರಾಜಸ್ವ ನಷ್ಟ ಉಂಟು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಅಧಿಕಾರಿಯು, 2024ನೇ ಸಾಲಿನಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ಶ್ರಮಿಸಿದ ಕಾರಣಕ್ಕಾಗಿ, ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಡಿ.3ರಂದು ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತನಿಖಾ ವರದಿಯ ಜೊತೆ ಅಗತ್ಯ ಮಾಹಿತಿಯನ್ನೊಳಗೊಂಡ ದಾಖಲೆಗಳನ್ನು ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯಕ್ತರಿಗೆ ಸಲ್ಲಿಸಿದ್ದೇವೆ
–ಕುಮಾರ, ಜಿಲ್ಲಾಧಿಕಾರಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.