ಮದ್ದೂರು ಪಟ್ಟಣದಲ್ಲಿ ಮಂಗಳವಾರ ಬಂದ್ ಅಂಗವಾಗಿ ಅಂಗಡಿಗಳು ಮುಚ್ಚಿದ್ದು, ಜನ ಸಂಚಾರ ವಿರಳವಾಗಿತ್ತು
ಪ್ರಜಾವಾಣಿ ಚಿತ್ರ
ಮದ್ದೂರು (ಮಂಡ್ಯ ಜಿಲ್ಲೆ): ಗಣೇಶನ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು, ಎರಡು ದಿನದಿಂದ ಕೋಮು ದಳ್ಳುರಿಯಲ್ಲಿ ಬೆಂದಿದ್ದ ಪಟ್ಟಣ ಮಂಗಳವಾರ ಶಾಂತ ಸ್ಥಿತಿಗೆ ಮರಳಿತ್ತು.
ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವ ಪರ ಸಂಘಟನೆಗಳು ಕರೆ ನೀಡಿದ್ದ ‘ಮದ್ದೂರು ಬಂದ್’ಗೆ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬುಧವಾರ ಬೆಳಿಗ್ಗೆವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಪಟ್ಟಣದಲ್ಲಿ ಮದ್ಯ ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.
‘22 ಆರೋಪಿಗಳನ್ನು ಬಂಧಿಸಿದ್ದು, ನಾಲ್ವರಿಗಾಗಿ ಹುಡುಕಾಟ ನಡೆದಿದೆ. ಮಸೀದಿಯಿಂದ ಕಲ್ಲು ತೂರಲಾಗಿದೆ ಎಂಬುದಕ್ಕೆ ವಿಡಿಯೊ ಸಾಕ್ಷ್ಯ ಸಿಕ್ಕಿಲ್ಲ. ರಾಮನಗರ ಜಿಲ್ಲೆಯ ಇಬ್ಬರು ಕೃತ್ಯದಲ್ಲಿ ಭಾಗವಹಿಸಿರುವುದು ಗೊತ್ತಾಗಿದೆ. ಘಟನೆಯಲ್ಲಿ ಯಾರ ಕೈವಾಡವಿದೆ? ಇದು ಪೂರ್ವನಿಯೋಜಿತವೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ’ ಎಂದು ಐಜಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.
ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿದ್ದರು. ಮದ್ದೂರು ತಾಲ್ಲೂಕಿನ ಭಾರತೀನಗರ, ಕೊಪ್ಪ, ಕೆಸ್ತೂರು, ಬೆಸಗರಹಳ್ಳಿ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಕೆಎಸ್‌ಆರ್‌ಟಿಸಿ ಬಸ್ ಮತ್ತು ಆಟೊಗಳಿದ್ದರೂ ಪ್ರಯಾಣಿಕರು ಕಡಿಮೆ ಇದ್ದರು. ಜನ ಸಂಚಾರ ವಿರಳವಾಗಿತ್ತು. ಕಲ್ಲು ತೂರಾಟ ನಡೆದ ಸ್ಥಳ, ಮಸೀದಿ, ಪ್ರಮುಖ ವೃತ್ತಗಳಲ್ಲಿ ಪೊಲೀಸರು ಠಿಕಾಣಿ ಹೂಡಿದ್ದು, ಪಟ್ಟಣವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ಜಿಲ್ಲಾಧಿಕಾರಿ ಕುಮಾರ, ಐಜಿಪಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪಟ್ಟಣದಲ್ಲೇ ಎರಡು ದಿನದಿಂದ ಮೊಕ್ಕಾಂ ಹೂಡಿದ್ದಾರೆ. ಶಾಲಾ–ಕಾಲೇಜು, ಸರ್ಕಾರಿ ಕಚೇರಿ, ಆಸ್ಪತ್ರೆ, ಮೆಡಿಕಲ್ ಶಾಪ್, ಬ್ಯಾಂಕ್, ಹಾಲಿನ ಮಳಿಗೆ, ತರಕಾರಿ ಅಂಗಡಿ, ಪೆಟ್ರೋಲ್ ಬಂಕ್ ಎಂದಿನಂತೆ ತೆರೆದಿದ್ದವು.
ಕಲ್ಲು ತೂರಾಟ ಪ್ರಕರಣದ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮದ್ದೂರು ವಕೀಲರ ಸಂಘದ ಸದಸ್ಯರು ನಿರ್ಧರಿಸಿ, ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ, ಬಂದ್‌ಗೆ ಬೆಂಬಲ ಸೂಚಿಸಿದರು.
500 ಆರೋಪಿಗಳ ವಿರುದ್ಧ ಎಫ್‌ಐಆರ್
ಕಲ್ಲು ತೂರಾಟದ ಪ್ರಮುಖ ಆರೋಪಿ ಎನ್ನಲಾದ ಜಾಫರ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಲ್ಲು ತೂರಾಟ ಖಂಡಿಸಿ ನಡೆದಿದ್ದ ಪ್ರತಿಭಟನೆ ವೇಳೆ ಕಲ್ಲು ತೂರಾಟ ಬಾವುಟ ಬಂಟಿಂಗ್ಸ್ ಕಿತ್ತೆಸೆದವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮಸೀದಿಗೆ ನುಗ್ಗಲು ಯತ್ನ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇರೆಗೆ ಗಿರೀಶ್ ಸೌಮ್ಯ ರಮ್ಯಾ ಪಲ್ಲವಿ ಸೇರಿದಂತೆ ಒಟ್ಟು 500 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
28 ಗಣೇಶಮೂರ್ತಿಗಳ ಸಾಮೂಹಿಕ ವಿಸರ್ಜನೆ
ಇಂದು ಮದ್ದೂರು ಪಟ್ಟಣದಲ್ಲಿ ಸೆ.10ರಂದು 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಕಾರ್ಯ ನಡೆಯಲಿದೆ. ಬಿಗಿ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ‘ಮೆರವಣಿಗೆಯಲ್ಲಿ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮಾರ್ಗದ ಬಗ್ಗೆ ಪೊಲೀಸರ ಜೊತೆ ಚರ್ಚಿಸಲಾಗಿದೆ’ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ತಿಳಿಸಿದ್ದಾರೆ.
ಬಿಜೆಪಿ ನಿಯೋಗ ಭೇಟಿ ಇಂದು
ಪಟ್ಟಣಕ್ಕೆ ಸೆ.10ರಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ರಾಜ್ಯ ಮಟ್ಟದ ನಾಯಕರ ನಿಯೋಗ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ.
ಕಲ್ಲು ತೂರಾಟ ನಡೆದ ಮದ್ದೂರು ಪಟ್ಟಣದ ರಾಮ್ ರಹೀಂ ಬಡಾವಣೆಯ ಮಸೀದಿ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು – ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.