ADVERTISEMENT

ತಗ್ಗಿ, ಬಗ್ಗಿ ನಡೆದರೆ ಗೆಲುವು ನಮ್ಮದೆ-; ಅಭಿಷೇಕ್

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:59 IST
Last Updated 2 ಮೇ 2019, 11:59 IST
ಶ್ರೀರಂಗಪಟ್ಟಣ ತಾಲ್ಲೂಕು ಬಾಬುರಾಯನಕೊಪ್ಪಲು ಗ್ರಾಮದ ಭಾರತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತ್ತು ಅಂಬರೀಷ್ ಅಭಿಮಾನಿಗಳ ಸಭೆಯಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ಮಾತನಾಡಿದರು
ಶ್ರೀರಂಗಪಟ್ಟಣ ತಾಲ್ಲೂಕು ಬಾಬುರಾಯನಕೊಪ್ಪಲು ಗ್ರಾಮದ ಭಾರತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತ್ತು ಅಂಬರೀಷ್ ಅಭಿಮಾನಿಗಳ ಸಭೆಯಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ಮಾತನಾಡಿದರು   

ಶ್ರೀರಂಗಪಟ್ಟಣ: ‘ಸದ್ಯದ ಪರಿಸ್ಥಿತಿಯಲ್ಲಿ ಜನರು ನಮ್ಮ ತಾಯಿ ಸುಮಲತಾ ಪರವಾಗಿದ್ದು, ಬೆಂಬಲಿಗರು ತಗ್ಗಿ, ಬಗ್ಗಿ ನಡೆದು ಏ. 18ರವರೆಗೆ ಶ್ರಮಪಟ್ಟರೆ ಚುನಾವಣೆಯಲ್ಲಿ ಗೆಲುವು ಖಚಿತ’ ಎಂದು ಅಭಿಷೇಕ್ ಅಂಬರೀಷ್ ಹೇಳಿದರು.

ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಭಾರತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕೆ.ಶೆಟ್ಟಹಳ್ಳಿ ಹೋಬಳಿ ಬಿಜೆಪಿ, ಕಾಂಗ್ರೆಸ್ ಮತ್ತು ಅಂಬರೀಷ್ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಮಗೆ ಸದ್ಯಕ್ಕೆ ಯಾವುದೇ ಪಕ್ಷ ಇಲ್ಲ. ಹಾಗಾಗಿ ನಮ್ಮ ತಾಯಿಯ ಪರವಾಗಿ ಕೆಲಸ ಮಾಡುವವರು ಧೈರ್ಯವಾಗಿ ಪ್ರಚಾರ ನಡೆಸಬಹುದು. ಚುನಾವಣೆಯನ್ನು ಲಘುವಾಗಿ ಪರಿಗಣಿ ಸಬಾರದು. ಗೆಲ್ಲಬೇಕಾದರೆ ಪ್ರತಿ ಬೂತ್‌ಗಳಲ್ಲೂ ಸೈನಿಕರಂತೆ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಪ್ರಚಾರದ ವೇಳೆ ಪ್ರತಿ ಹಳ್ಳಿಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಹುಮ್ಮಸ್ಸು ಹೆಚ್ಚಿಸಿದ್ದು, ಗೆಲ್ಲುವ ವಿಶ್ವಾಸ ಮೂಡಿಸಿದೆ’ ಎಂದು ಅಭಿಷೇಕ್ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಂಬರೀಷ್ ಆಪ್ತ ಎಸ್.ಎಲ್.ಲಿಂಗರಾಜು, ‘ಸುಮಲತಾ ಅವರ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅತ್ಯಗತ್ಯ. ಪ್ರತಿ ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಅಂಬರೀಷ್ ಅವರ ಕೊಡುಗೆಗಳನ್ನು ಜನರಿಗೆ ತಿಳಿಸಿ ಗೆಲುವಿಗೆ ಅಹೋರಾತ್ರಿ ದುಡಿಯಬೇಕು’ ಎಂದರು.

ರೈತ ನಾಯಕ ಕೆ.ಎಸ್. ನಂಜುಂಡೇಗೌಡ, ‘ಮಂಡ್ಯ ರಾಜಕಾರಣದ ಇತಿಹಾಸದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿಲ್ಲ. ಇಡೀ ದೇಶವೇ ಮಂಡ್ಯ ಕ್ಷೇತ್ರದತ್ತ ದೃಷ್ಟಿ ನೆಟ್ಟಿದೆ. ಮತದಾರನಿಗೆ ಗೌರವ ಸಿಗಬೇಕಾದರೆ ಮಂಡ್ಯದ ಸೊಸೆ ಸುಮಲತಾ ಅವರನ್ನು ಗೆಲ್ಲಿಸಬೇಕು’ ಎಂದು ಹೇಳಿದರು.

ಪಿಎಸ್ಎಸ್‌ಕೆ ನಿರ್ದೇಶಕರಾದ ಬಿ.ಸಿ. ಕೃಷ್ಣೇಗೌಡ, ಪ್ರವೀಣ್‌ಕುಮಾರ್, ಪಾಂಡು, ಮರಳಗಾಲ ಕೃಷ್ಣೇಗೌಡ, ಮನ್ಮುಲ್ ನಿರ್ದೇಶಕ ಬೋರೇಗೌಡ, ಸುರೇಂದ್ರಪ್ಪ, ದೀಪಕ್, ರಘು, ಪುರಸಭೆ ಸದಸ್ಯ ಸುನಿಲ್, ಟಿ.ಎಂ.ಹೊಸೂರು ಶಂಕರ್, ನಟೇಶ್, ಮಹದೇವಸ್ವಾಮಿ ಇತರರು ಈ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.