ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಗಡಿಭಾಗದಲ್ಲಿರುವ ಎ.ನಾಗತಿಹಳ್ಳಿಯ (ಅಳಿಸಂದ್ರ ನಾಗತಿಹಳ್ಳಿ) ಸರ್ಕಾರಿ ಶಾಲೆಯು ಶತಮಾನದ ಸಂಭ್ರಮದಲ್ಲಿದೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಯು ಖಾಸಗಿ ಕಾನ್ವೆಂಟ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ.
1925ರಲ್ಲಿ ಆರಂಭಗೊಂಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯು ಗ್ರಾಮದ ಸುತ್ತಮುತ್ತಲಿನ 20 ಹಳ್ಳಿಗಳ ಪಾಲಿನ ಶಿಕ್ಷಣ ಕೇಂದ್ರವಾಗಿತ್ತು. 1950ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಗುಣಮಟ್ಟದ ಬೋಧನೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಜ್ಞಾನದೇಗುಲವಾಗಿದೆ.
ಜಾನಪದ ತಜ್ಞ ಎಚ್.ಎಲ್. ನಾಗೇಗೌಡ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ, ಅಮೆರಿಕದ ಮಿಯಾಮಿ ವಿ.ವಿ.ಯಲ್ಲಿರುವ ಸಹ ಪ್ರಾಧ್ಯಾಪಕ ಡಾ.ನಾಗರಾಜು ಸೇರಿದಂತೆ ಹಲವು ಪ್ರತಿಭಾವಂತರನ್ನು ಶಾಲೆಯು ಕೊಡುಗೆಯಾಗಿ ನೀಡಿದೆ.
20ರಿಂದ 211ಕ್ಕೆ ಏರಿಕೆ!
ಖಾಸಗಿ ಶಾಲೆಗಳ ಪ್ರಭಾವದಿಂದ ಇಲ್ಲಿಯೂ ವಿದ್ಯಾರ್ಥಿಗಳ ಪ್ರವೇಶಾತಿ ಗಣನೀಯವಾಗಿ ಕುಸಿದಿತ್ತು. 2019–20ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 20ಕ್ಕೆ ಇಳಿದು ಮುಚ್ಚುವ ಹಂತ ತಲುಪಿತ್ತು. ಆಗ ಗ್ರಾಮದಲ್ಲಿ ಸಭೆ ನಡೆಸಿ, ಪೋಷಕರು ಮತ್ತು ವಿದ್ಯಾರ್ಥಿಗಳ ಮನದಿಂಗಿತವನ್ನು ಶಿಕ್ಷಕರು ಅರ್ಥಮಾಡಿಕೊಂಡರು. ನಂತರ ಶಾಲೆಗೆ ಇಂಗ್ಲಿಷ್ ಮಾಧ್ಯಮವನ್ನು ತರುವಲ್ಲಿ ಯಶಸ್ವಿಯಾದರು. ಈ ‘ದ್ವಿಭಾಷಾ ಶಾಲೆ’ಯಲ್ಲಿ ಪ್ರಸ್ತುತ 211 ವಿದ್ಯಾರ್ಥಿಗಳಿದ್ದಾರೆ.
‘ಡೊನೇಷನ್ ಇಲ್ಲ, ದುಬಾರಿ ಶುಲ್ಕವಿಲ್ಲ, ಉಚಿತವಾಗಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬಹುದು. ಊಟ ತರಬೇಕಿಲ್ಲ. ಬಿಸಿಯೂಟ, ಹಾಲು, ಮೊಟ್ಟೆ, ರಾಗಿಮಾಲ್ಟ್ ಕೊಡುತ್ತೇವೆ. ಪಠ್ಯಪುಸ್ತಕ, ಸಮವಸ್ತ್ರ, ಶೂ ಸಾಕ್ಸ್‌ಗಳೂ ಉಚಿತ ಎಂದು ಹಿರಿಯ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದರಿಂದ ಶಾಲೆಯ ಸೀಟುಗಳಿಗೆ ಭಾರಿ ಬೇಡಿಕೆಯಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಆರ್.ಎಸ್. ಪ್ರಭು.
ನಾಗತಿಹಳ್ಳಿ ಕೊಡುಗೆ:
ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅವರು ಸ್ವಂತ ಹಣದಿಂದ ‘ಸಿಹಿಕನಸು’ ರಂಗಮಂದಿರ, ಕಂಪ್ಯೂಟರ್ ಲ್ಯಾಬ್, ಬೃಹತ್ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ನಂತರ ಜನಪ್ರತಿನಿಧಿಗಳು, ದಾನಿಗಳು ಮತ್ತು ವಿವಿಧ ಇಲಾಖೆಗಳ ಯೋಜನೆಗಳ ನೆರವು ಪಡೆದು, ಸಂಸ್ಕೃತಿಭವನ, ಪರಿಸರಸ್ನೇಹಿ ಶಾಲಾ ಕಟ್ಟಡ, ವಿಜ್ಞಾನ ಪ್ರಯೋಗಾಲಯ, ಆಡಿಟೋರಿಯಂ, ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್, ಶುದ್ಧ ಕುಡಿಯುವ ನೀರಿನ ಘಟಕ, ಬಾಲಕ–ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕಾಂಪೌಂಡ್, ಕ್ರೀಡೋಪಕರಣಗಳು ಸೇರಿದಂತೆ ಪಠ್ಯ–ಪಠ್ಯೇತರ ಚಟುವಟಿಕೆಗೆ ಪೂರಕವಾದ ವಾತಾವರಣ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಗಳು ರಾಜಕೀಯೇತರ ಸಾಂಸ್ಕೃತಿಕ ಕೇಂದ್ರಗಳಾಗಬೇಕೆಂಬ ಆಶಯದೊಂದಿಗೆ ಇಪ್ಪತ್ತು ವರ್ಷಗಳ ಹಿಂದೆ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ರೂಪುಗೊಂಡಿತು. ಶತಮಾನೋತ್ಸವದಲ್ಲಿ ಹೊರಗಿನವರೂ ಸಂಭ್ರಮಿಸುತ್ತಿದ್ದಾರೆ.ನಾಗತಿಹಳ್ಳಿ ಚಂದ್ರಶೇಖರ ಸಾಹಿತಿ
ನಾಗಮಂಗಲ ತಾಲ್ಲೂಕಿನ ಗಡಿಭಾಗದ ಶಾಲೆ ಸ್ವಾತಂತ್ರ್ಯಪೂರ್ವದಲ್ಲೇ ಆರಂಭವಾಗಿತ್ತು ಮಕ್ಕಳ ಕೊರತೆಯಿಂದ ಕ್ರಮೇಣ ಚೇತರಿಕೆ
21ನೇ ನಾಗತಿಹಳ್ಳಿ ಸಂಸ್ಕೃತಿ ಹಬ್ಬ
ಇಂದಿನಿಂದ ಈ ಶಾಲೆಯ ಅಂಗಳದಲ್ಲಿ ಮಾರ್ಚ್ 26ರಿಂದ 30ರವರೆಗೆ ಹಮ್ಮಿಕೊಂಡಿರುವ ‘21ನೇ ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. 26ರಂದು ಶಾಲೆಯ ಮಕ್ಕಳು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 27ರಂದು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಕಾವ್ಯ ರಸಗ್ರಹಣ ಶಿಬಿರ ರೈತರೊಂದಿಗೆ ಸಂವಾದ ಜನಪದ ಗೀತೆ ಮತ್ತು ನೃತ್ಯ ಪ್ರದರ್ಶನಗಳಿರಲಿವೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಟನ ರಂಗಶಾಲೆಯಿಂದ ‘ಮಕ್ಕಳ ಮಹಾಭಾರತ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಗ್ರಂಥಪಾಲಕ ಕಾಂತರಾಜು ನಾಗತಿಹಳ್ಳಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.