ಎಸ್.ಸಂತೋಷ್
ಪಾಂಡವಪುರ (ಮಂಡ್ಯ): ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ 30 ದಿನಗೊಳಗಾಗಿ ಮಾಹಿತಿ ಒದಗಿಸದೆ, 240ಕ್ಕೂ ಹೆಚ್ಚು ದಿನ ವಿಳಂಬ ಮಾಡಿದ ಪಾಂಡವಪುರದ ತಹಶೀಲ್ದಾರ್ ಎಸ್.ಸಂತೋಷ್ ಅವರಿಗೆ ₹25 ಸಾವಿರ ದಂಡವನ್ನು ಕರ್ನಾಟಕ ಮಾಹಿತಿ ಆಯೋಗ ವಿಧಿಸಿದೆ.
ವಿಧಿಸಿರುವ ದಂಡದ ಮೊತ್ತವನ್ನು ಒಂದೇ ಕಂತಿನಲ್ಲಿ ಮುಂದಿನ ತಿಂಗಳ ಸಂಬಳದಲ್ಲೇ ಕಟಾಯಿಸಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ, ಜಮಾ ಮಾಡಿದ ರಸೀದಿಯೊಂದಿಗೆ ವರದಿ ಸಲ್ಲಿಸಲು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರಿಗೆ ಆಯೋಗವು ನಿರ್ದೇಶಿಸಿದೆ. ತಪ್ಪಿದಲ್ಲಿ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇದಲ್ಲದೆ ಮಾಹಿತಿ ಒದಗಿಸಲು 240ಕ್ಕೂ ಹೆಚ್ಚು ದಿನ ವಿಳಂಬವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಅರ್ಜಿದಾರರಾದ ಎಲ್.ಎಂ. ಚಂದ್ರು ಅವರು ಅನುಭವಿಸಿರುವ ಕಷ್ಟ ಇತರೆ ವೆಚ್ಚಗಳಿಗಾಗಿ ₹10 ಸಾವಿರ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ಈ ಪರಿಹಾರ ಮೊತ್ತವನ್ನು 15 ದಿನಗಳೊಳಗಾಗಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಕ್ರಾಸ್ ಮಾಡಿದ ಡಿಡಿ ಪಡೆದು ಮೇಲ್ಮನವಿದಾರರಿಗೆ ನೋಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ಕಳುಹಿಸಿ ಕೊಡಬೇಕೆಂದು ತಹಶೀಲ್ದಾರ್ ಎಸ್.ಸಂತೋಷ್ ಅವರಿಗೆ ಸೂಚಿಸಿದೆ.
ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಿರುವ ಬಗ್ಗೆ ಆಯೋಗಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಸತತವಾಗಿ ವಿಚಾರಣೆಗೆ ಗೈರುಹಾಜರಾಗಿ ಪ್ರಕರಣದ ಶೀಘ್ರ ವಿಲೇವಾರಿಗೆ ಅಡ್ಡಿಪಡಿಸುತ್ತಿರುವುದಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮ ಪ್ರಕಾರ ಏಕೆ ಕ್ರಮಕ್ಕೆ ಶಿಫಾರಸು ಮಾಡಬಾರದು? ಎಂಬ ಬಗ್ಗೆ ಕಾರಣ ಕೇಳಿ ತಮ್ಮ ಲಿಖಿತ ಸಮಜಾಯಿಷಿಯನ್ನು ಮುಂದಿನ ವಿಚಾರಣೆ ದಿನದಂದು ಸಲ್ಲಿಸಬೇಕೆಂದು ತಹಶೀಲ್ದಾರ್ ಎಸ್.ಸಂತೋಷ್ ಅವರಿಗೆ ಆಯೋಗವು ನಿರ್ದೇಶಿಸಿದೆ.
ಸದರಿ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಪ್ರತಿವಾದಿ ತಹಶೀಲ್ದಾರ್ ಅವರಿಗೆ ಸೂಚಿಸಿದೆ. ಆಯೋಗವು ಈ ಪ್ರಕರಣವನ್ನು ಏ.9ರಂದು ಬೆಳಿಗ್ಗೆ 11ಕ್ಕೆ ನಿಗದಿಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.