
ಮಂಡ್ಯ: ‘ಮಳೆ, ಬಿಸಿಲು, ಚಳಿ ಮತ್ತು ಅವರ ಮಾನಸಿಕ, ದೈಹಿಕ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ರಕ್ಷಣೆಗಾಗಿ ದುಡಿಯುವ ಪೊಲೀಸರು ಸಮಾಜದ ನಿಜವಾದ ರಕ್ಷಕರು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ -2025 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹಳ ದೊಡ್ಡದು. ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲೆಯ ಶಾಂತಿ, ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ದೇಶದ ಗಡಿಯಲ್ಲಿ ಸೈನಿಕರು ದೇಶವನ್ನು ರಕ್ಷಿಸಿದರೆ, ದೇಶದ ಒಳಗೆ ಸಮಾಜವನ್ನು ಮತ್ತು ಜನರನ್ನು ಪೊಲೀಸ್ ಅಧಿಕಾರಿಗಳು ರಕ್ಷಿಸುತ್ತಿದ್ದಾರೆ. ಆದ್ದರಿಂದ ಗಡಿಯಲ್ಲಿ ದೇಶವನ್ನು ರಕ್ಷಿಸಲು ಯೋಧರು ಎಷ್ಟು ಮುಖ್ಯವೋ ದೇಶದ ಒಳಗೆ ಸಮಾಜವನ್ನು ರಕ್ಷಿಸಲು ಪೊಲೀಸ್ ಅಧಿಕಾರಿಗಳು ಅಷ್ಟೇ ಮುಖ್ಯವಾಗಿತ್ತಾರೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ‘ನಿಸ್ವಾರ್ಥ ಸೇವೆಗೆ ಮತ್ತು ಶಿಸ್ತಿಗೆ ಮತ್ತೊಂದು ಹೆಸರು ಪೊಲೀಸ್ ಇಲಾಖೆ. ಯಾವುದೇ ಸಮಯ, ಸಂದರ್ಭದಲ್ಲಿ ಸಮಾಜದ ರಕ್ಷಣೆಗಾಗಿ ಮತ್ತು ಜನರ ಸೇವೆಗಾಗಿ ದುಡಿಯುವವರು ಪೊಲೀಸ್ ಸಿಬ್ಬಂದಿ ಎಂದರೆ ತಪ್ಪಾಗುವುದಿಲ್ಲ’ ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ತಂತ್ರಜ್ಞಾನ ಬಳಕೆಯಿಂದ ಅಪರಾಧ ಪತ್ತೆ ಹಚ್ಚುವಲ್ಲಿ ಮತ್ತು ಅಪರಾಧ ತಡೆಯುವಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಮಂಡ್ಯ ಜಿಲ್ಲೆ ಪೊಲೀಸ್ ಇಲಾಖೆಯು ಬಹಳ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಾ ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಮತ್ತು ತಿಮ್ಮಯ್ಯ ಇದ್ದರು.