
ಮಂಡ್ಯ: ‘ಮೇಕೆದಾಟು ಯೋಜನೆ ಪ್ರಾರಂಭಿಸಲು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ 5 ಗ್ರಾಮಗಳಲ್ಲಿ 1,079 ಹೆಕ್ಟೇರ್ ಅರಣ್ಯ ಪ್ರದೇಶದ ಮುಳುಗಡೆಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಳುಗಡೆಯಾಗುವ ಪ್ರದೇಶಕ್ಕೆ ಬದಲಿಯಾಗಿ 1:2 ಅನುಪಾತದಲ್ಲಿ ಜಿಲ್ಲೆಯ 2,204 ಹೆಕ್ಟೇರ್ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ಜಾಗ ಗುರುತಿಸಲಾಗಿತ್ತು. ಈ ಹಿಂದೆ ಗುರುತಿಸಲಾದ 2,204 ಹೆಕ್ಟೇರ್ ಜಾಗವನ್ನು ಈಗ ತೆಗೆದುಕೊಳ್ಳಲಾಗುತ್ತಿಲ್ಲ’ ಎಂದು ತಿಳಿಸಿದರು.
‘ಅರಣ್ಯ ಇಲಾಖೆಗೆ 1:1 ಅನುಪಾತದಲ್ಲಿ 1,079 ಹೆಕ್ಟೇರ್ ಅರಣ್ಯೇತರ ಜಾಗ, ಗೋಮಾಳ, ಸರ್ಕಾರಿ ಜಾಗಗಳನ್ನು ನೀಡಬೇಕು. ಈಗಾಗಲೇ ಪಾಂಡವಪುರ ಮತ್ತು ನಾಗಮಂಗಲದಲ್ಲಿ 307 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು, ಅರಣ್ಯ ಇಲಾಖೆಯೂ ಸಹ ಸದರಿ ಜಾಗಕ್ಕೆ ಸೂಕ್ತತೆ ಪ್ರಮಾಣ ಪತ್ರ ನೀಡಿದೆ’ ಎಂದರು.
‘ಬಾಕಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ ಅರಣ್ಯ ಇಲಾಖೆಗೆ ನೀಡಬೇಕು. ಅಧಿಕಾರಿಗಳು ತಾಲ್ಲೂಕುವಾರು ತಂಡ ರಚಿಸಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ 15 ದಿನಗಳೊಳಗಾಗಿ ಸೂಕ್ತತೆ ಪ್ರಮಾಣ ಪಡೆಯಬೇಕು. ಉಪ ಮುಖ್ಯಮಂತ್ರಿಗಳು ಪ್ರತಿ 15 ದಿನಗಳಿಗೊಮ್ಮೆ ಮೇಕೆದಾಟು ಯೋಜನೆ ಕುರಿತು ಸಭೆ ನಡೆಸಲಿದ್ದಾರೆ’ ಎಂದರು.
‘ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಎ.ಸಿ.ಎಫ್, ಎ.ಡಿ.ಎಲ್.ಆರ್ ಮತ್ತು ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಸೂಕ್ತ ಪರ್ಯಾಯ ಜಾಗ ಗುರುತಿಸಬೇಕು. ಅರಣ್ಯೇತರ ಜಾಗವನ್ನು ಗುರುತಿಸುವಾಗ ಅಕ್ರಮ ಸಕ್ರಮ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಗುರುತಿಸಿರುವ ಜಾಗದ ಸರ್ವೇ ಮತ್ತು ಸ್ಕೆಚ್ ಕಡ್ಡಾಯವಾಗಿ ಮಾಡಬೇಕು’ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಮನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ತಾಲ್ಲೂಕು ಮಟ್ಟದ ಅರಣ್ಯಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.