ಮಳವಳ್ಳಿ: ತಹಶೀಲ್ದಾರ್, ಡಿವೈಎಸ್‌ಪಿ, ತಾ.ಪಂ.ಇಒ ಸೇರಿ ಹಲವು ಇಲಾಖೆಯ ಅಧಿಕಾರಿಗಳು ತಂಡ ರಚಿಸಿಕೊಂಡು ವಸತಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳೊಂದಿಗೆ ಊಟ ಮಾಡಬೇಕು. ಕೆಲವೆಡೆ ಸಿ.ಸಿ.ಟಿ.ವಿಗಳು ನಿರುಪಯುಕ್ತವಾಗಿವೆ. ಇವುಗಳನ್ನು ಪರಿಶೀಲಿಸಬೇಕು ಎಂದು ಡಿವೈಎಸ್‌ಪಿ ವಿ.ಕೃಷ್ಣಪ್ಪ ಅವರಿಗೆ ಶಾಸಕರು ಸೂಚಿಸಿದರು.
ಆರು ತಿಂಗಳಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಬೇಕಾದ ಸವಲತ್ತು ಒದಗಿಸಲಾಗುವುದು. ತಾಲ್ಲೂಕು ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಜೊತೆಗೂಡಿ ಪ್ರತಿ ತಿಂಗಳು ಹೋಬಳಿವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣಾ ಶಿಬಿರ ನಡೆಸಬೇಕು. ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಬಗ್ಗೆ ದೂರುಗಳಿವೆ. ಸರಿ ಮಾಡಿಕೊಳ್ಳದಿದ್ದರೇ ಶಿಸ್ತು ಕ್ರಮಕ್ಕೆ ಸಿದ್ಧವಿರಿ ಎಂದು ಎಚ್ಚರಿಸಿದರು.
ಇದೇ ಮೊದಲ ಬಾರಿಗೆ ಸಭೆಯಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿರುವ ಜಾಗಗಳನ್ನು ಶಿಕ್ಷಣ ಇಲಾಖೆ ಹೆಸರಿಗೆ ವರ್ಗಾಯಿಸಿಕೊಳ್ಳಲು ಕ್ರಮ ವಹಿಸಬೇಕು ಎಂದು ಬಿಇಒ ವಿ.ಇ.ಉಮಾ ಅವರಿಗೆ ಸೂಚಿಸಿದರು. ಶೌಚಾಲಯ, ಕಟ್ಟಡದ ದುರಸ್ತಿಗೆ ಅಗತ್ಯ ಅನುದಾನ ನೀಡುವುದಾಗಿಯೂ ತಿಳಿಸಿದರು.
ಈಗಾಗಲೇ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ. ಸದ್ಯದಲ್ಲಿಯೇ ಆಸ್ತಿ ಸಂರಕ್ಷಣಾ ಅಭಿಯಾನ ನಡೆಸಲಾಗುವುದು. ಅತಿಥಿ ಶಿಕ್ಷಕರ ಕೊರತೆ ಇಲ್ಲ ಎಂದು ಬಿಇಒ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ತಳಗವಾದಿ ಸೈನ್ಸ್ ಪಾರ್ಕ್ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಕೆ.ವಿವೇಕಾನಂದ ಅವರು, ₹ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕ್‌ನ ಉಪಕರಣಗಳು ಕಿತ್ತು ಬರುತ್ತಿವೆ. ಏಕೆ ಕ್ರಮ ವಹಿಸಿಲ್ಲ ಎಂದು ಬಿಇಒ ವಿ.ಇ.ಉಮಾ ಹಾಗೂ ತಾ.ಪಂ. ಇಒ ಎಚ್.ಜಿ. ಶ್ರೀನಿವಾಸ್ ಅವರನ್ನು ಪ್ರಶ್ನಿಸಿದ ಅವರು ಕೂಡಲೇ ಅದನ್ನು ಸರಿಪಡಿಸಬೇಕು ಎಂದು ತಾಕೀತು ಮಾಡಿದರು.
ಈ ಬಗ್ಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರತಿಕ್ರಿಯಿಸಿ, ಕೂಡಲೇ ಸ್ಥಳಕ್ಕೆ ತೆರಳಿ ಜಂಟಿ ಸರ್ವೆ ನಡೆಸಿ ವರದಿ ನೀಡಬೇಕು. ಅಕ್ರಮ ನಡೆದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಾಲ್ಲೂಕು ಉಸ್ತುವಾರಿ ಕಾರ್ಯದರ್ಶಿ ಸುಶೀಲಮ್ಮ, ತಹಶೀಲ್ದಾರ್ ಎಸ್.ವಿ.ಲೋಕೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಪಿ.ಮಾದೇಶ್ ಸಭೆಯಲ್ಲಿ ಇದ್ದರು.
‘ಆರ್‌ಟಿಐ ಕಿರುಕುಳ ತಪ್ಪಿಸಿ’
ಆರ್‌ಟಿಐ ಕಾಯ್ದೆಯ ಹೆಸರಿನಲ್ಲಿ ಮಹಿಳಾ ವೈದ್ಯರು ಸೇರಿ ಹಲವು ಅಧಿಕಾರಿಗಳನ್ನು ಶೋಷಣೆ ಮಾಡಲಾಗುತ್ತಿದೆ. ಯಾರೋ ಹೊರಗಡೆ ವ್ಯಕ್ತಿ ಅಧಿಕಾರಿಗಳಿಗೆ ಅನವಶ್ಯ ಅರ್ಜಿ ಹಾಕಿ ಶೋಷಣೆ ಮಾಡುತ್ತಿದ್ದಾರೆ. ಕಾಯ್ದೆಯ ದುರುಪಯೋಗಪಡಿಸಿಕೊಳ್ಳದಂತೆ ಕ್ರಮ ವಹಿಸಿ ಎಂದು ಡಿವೈಎಸ್ಪಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚಿಸಿದರು. ಪ್ರತಿ ತಿಂಗಳು ಮಹಿಳಾ ವೈದ್ಯರ ಸಮಸ್ಯೆಗಳ ಬಗ್ಗೆ ಸಭೆ ನಡೆಸಲು ಡಾ.ಪಿ.ವೀರಭದ್ರಪ್ಪ ಅವರಿಗೆ ಸಲಹೆ ನೀಡಿದರು. ‘ಅಧಿಕಾರಿಗಳು ಸರ್ಕಾರದ ಭಾಗ ಯಾರೂ ದೃತಿಗೆಡಬಾರದು. ಮುಕ್ತ ವಾತಾವರಣದಲ್ಲಿ ಕೆಲಸ ಮಾಡಬೇಕು. ನಿಮ್ಮ ಮೌನ ನಿಮಗೆ ಮುಂದೆ ದೊಡ್ಡ ಸಮಸ್ಯೆಯಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.