ADVERTISEMENT

ಡಿಕೆಶಿ ಸಿಎಂ ವಿಚಾರ | ಹೈಕಮಾಂಡ್‌ ಸ್ಪಷ್ಟಪಡಿಸಲಿ: ಮಂಡ್ಯ ಶಾಸಕ ಪಿ. ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:23 IST
Last Updated 19 ಫೆಬ್ರುವರಿ 2026, 5:23 IST
ಪಿ.ರವಿಕುಮಾರ್‌, ಶಾಸಕ 
ಪಿ.ರವಿಕುಮಾರ್‌, ಶಾಸಕ    

ಮಂಡ್ಯ: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀರಾ ಅಥವಾ ಮಾಡಲ್ವಾ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು’ ಎಂದು ಶಾಸಕ ಪಿ.ರವಿಕುಮಾರ್‌‌ ಒತ್ತಾಯಿಸಿದರು. 

ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಹೈಕಮಾಂಡ್ ನಾಯಕರು ಸ್ಪಷ್ಟಪಡಿಸದಿದ್ದರೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗಲಿದೆ. ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಚರ್ಚೆಗೆ ಬ್ರೇಕ್ ಹಾಕಲಿ. ಇಲ್ಲದಿದ್ದರೇ ಈ ಚರ್ಚೆ ಬೆಳೆಯುತ್ತಾ ಹೋಗುತ್ತದೆ. ಇದರಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗುತ್ತೆ. ಟೈಂ ಪಾಸ್ ರೀತಿ ನಡೆಸಿಕೊಂಡರೆ ಆಗಲ್ಲ. ಹೈಕಮಾಂಡ್ ಈ ವಿಚಾರದಲ್ಲಿ ನಿರ್ಧಾರ ಮಾಡಬೇಕು’ ಎಂದು ಮನವಿ ಮಾಡಿದರು. 

ಹೈಕಮಾಂಡ್‌, ಸಿಎಂ ಮತ್ತು ಡಿಸಿಎಂ ನಡುವೆ ನಡೆದಿರುವ ಮಾತುಕತೆ ಬಗ್ಗೆ ನಮಗೆ ಗೊತ್ತಿಲ್ಲ. ದಿನಕ್ಕೊಬ್ಬರು ಹೇಳಿಕೆ ಕೊಡುವುದರಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಹಾನಿಯಾಗಲಿದೆ. ಶಾಸಕರು ದಿನ ಫಾರಿನ್ ಟ್ರಿಪ್ ಮಾಡಿಕೊಂಡು ಇರ‍್ತಾರೆ ಎಂದರು.

ADVERTISEMENT

ನಾನು 50 ಶಾಸಕರನ್ನು ಫಾರಿನ್ ಕರೆದುಕೊಂಡು ಹೋದರೆ ಸಿಎಂ ಬದಲಾಯಿಸಲು ಆಗಲ್ಲ. ಮಂಡ್ಯದಲ್ಲಿ ಕುಳಿತಿದ್ದರೂ ಸಿಎಂ ಬದಲಾಯಿಸಲು ಆಗಲ್ಲ. ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ಮಾಡುವ ಭರವಸೆ ಎಂದರು. 

ಸಚಿವ ಎಚ್.ಸಿ. ಮಹದೇವಪ್ಪ ಶಾಸಕರನ್ನು ಬೀದಿ ನಾಯಿಗೆ ಹೋಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾಯಿ ಎಂದರೇ ಪ್ರಾಮಾಣಿಕತೆ ಹಾಗೂ ನಿಯತ್ತು. ಡಿ.ಕೆ.ಶಿವಕುಮಾರ್ ಎಂದರೆ ಕಾಂಗ್ರೆಸ್ ಪಕ್ಷದ ನಿಯತ್ತು. ಅವರು ಹೈಕಮಾಂಡ್‌ನ ನಿಯತ್ತಿನ ಸೈನಿಕ. 40 ವರ್ಷಗಳಿಂದ ಹೈಕಮಾಂಡ್‌ಗೆ ನಿಯತ್ತಾಗಿದ್ದಾರೆ. ಎರಡು ಸಲ ಅವರನ್ನು ಮಂತ್ರಿ ಮಾಡಲಿಲ್ಲ. ಆದರೂ ಅವರು ಬೇಸರ ಮಾಡಿಕೊಳ್ಳಲಿಲ್ಲ. ಇನ್ನೂ ಸಿಎಂ ಆಗಿಲ್ಲ. ಆದರೂ ಅವರು ಬೇಸರ ಮಾಡಿಕೊಂಡಿಲ್ಲ. ಅವರು ಪಕ್ಷಕ್ಕೆ ನಿಯತ್ತಾಗಿದ್ದಾರೆ. ಅದಕ್ಕೆ ಮಹದೇವಪ್ಪ ಅವರು ಹಾಗೆ ಹೇಳಿದ್ದಾರೆ. ಒಂದು ವಾರ ನನಗೆ ಟೈಂ ಕೊಡಿ, ನೇರವಾಗಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.